ಭ್ರಷ್ಟ ಅಧಿಕಾರಿಗೆ ಉನ್ನತ ಹುದ್ದೆ: ನಿರಾಣಿ ಶಿಫಾರಸ್ಸಿಗೆ ಕಾಂಗ್ರೆಸ್ ಆಕ್ಷೇಪ

Update: 2022-12-02 09:18 GMT

ಬೆಂಗಳೂರು, ಡಿ.1: 'ಎಸಿಬಿ ದಾಳಿಗೆ ಒಳಗಾಗಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ಮಾಜಿ ಅಧಿಕಾರಿಯನ್ನು ಕೆಐಎಡಿಬಿಗೆ ವಿಶೇಷ ಕರ್ತವ್ಯಧಿಕಾರಿಯಾಗಿ ನೇಮಿಸಲು ಸಚಿವ ಮುರುಗೇಶ್ ನಿರಾಣಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ' ಎಂದು ಕಾಂಗ್ರೆಸ್ ಗಂಭೀರ ಆಪಾದನೆ ಮಾಡಿದೆ.

ಗುರುವಾರ ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರಕಾರ ಭ್ರಷ್ಟರನ್ನೇ ಹುಡುಕಿ ಮಣೆ ಹಾಕುತ್ತಿರುವುದೇಕೆ?, ಶೇ.40ರಷ್ಟು  ಕಮಿಷನ್ ಲೂಟಿಗೆ ಸಹಾಯವಾಗುತ್ತದೆ ಎಂದೇ? ಎಂದು ವಾಗ್ದಾಳಿ ನಡೆಸಿದೆ.

ಕೆಐಡಿಬಿ ಟೆಕ್ನಿಕಲ್ ಅಡ್ವೈಸರ್ ಹುದ್ದೆಗೆ ಮತ್ತೆ ಸ್ವಾಮಿ ತೆಗೆದುಕೊಳ್ಳಲು ಶಿಫಾರಸ್ಸು ಮಾಡಲಾಗಿದ್ದು,  ಟಿ.ಆರ್. ಸ್ವಾಮಿ 2020 ರ ಜೂನ್ ನಲ್ಲಿ ನಿವೃತ್ತಿ ಆಗಿದ್ದರು. ಟಿ.ಆರ್. ಸ್ವಾಮಿ ಅವರನ್ನು ನೇಮಿಸಿ ಆದೇಶ ಹೊರಡಿಸಬೇಕೆಂದು ಕೈಗಾರಿಕೆ ಇಲಾಖೆ ಎಸಿ ಎಸ್ ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಟಿ. ಆರ್. ಸ್ವಾಮಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಮಾನತ್ತು ಆಗಿದ್ದರು. ಇದೀಗ ಸ್ವಾಮಿಗೆ ಮತ್ತೆ ಹುದ್ದೆ ನೀಡಲು ಮುಂದಾಗಿರುವ ಕ್ರಮಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. 

ಸ್ವಾಮಿ ಕೆಐಎಡಿಬಿ ಸಿಇಓ ಗೆ ಟೆಕ್ನಿಕಲ್ ಅಡ್ವೈಸರ್ ಆಗಿ ಕೆಲಸ ಮಾಡಿದ್ದರು. ಕೇಂದ್ರ ಸರಕಾರದೊಂದಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸಂವಹನ ನಡೆಸುವ ಹೊಣೆ ಸ್ವಾಮಿಗೆ ದೊರಕಲಿದೆ ಎಂದು ಗೊತ್ತಾಗಿದ್ದು, ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ. 

Similar News