ಸೂಕ್ಷ್ಮ ಕೇಸ್‍ಗಳಲ್ಲಿ FIR ಪ್ರತಿ ಲೋಕಾ ವೆಬ್‍ಸೈಟ್‍ಗೆ ಹಾಕಲು ತಡ: ಹೈಕೋರ್ಟ್ ಗೆ ಹೇಳಿಕೆ

Update: 2022-12-01 17:35 GMT

ಬೆಂಗಳೂರು, ಡಿ. 1: ಸೂಕ್ಷ್ಮ ಕೇಸ್‍ಗಳಿಗೆ ಸಂಬಂಧಿಸಿದ ಪ್ರಥಮ ವರ್ತಮಾನ ವರದಿ (ಎಫ್‍ಐಆರ್)ಗಳನ್ನು ಮಾತ್ರ ವೆಬ್‍ಸೈಟ್‍ನಲ್ಲಿ ಹಾಕಲು ಲೋಕಾಯುಕ್ತ ಪೊಲೀಸ್ ವಿಭಾಗ ತಡ ಮಾಡುತ್ತದೆ ಎಂದು ಹೈಕೋರ್ಟ್‍ಗೆ ಸರಕಾರವು ಪ್ರಮಾಣ ಪತ್ರ ಸಲ್ಲಿಸಿದೆ.   

ಎಫ್‍ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‍ಸೈಟ್‍ನಲ್ಲಿ ಹಾಕಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರಿನ ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯ ಸರಕಾರವು ಸಲ್ಲಿಸಿದ ಪ್ರಮಾಣ ಪತ್ರವನ್ನು ಪರಿಗಣಿಸಿದ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು. 

ಲೋಕಾಯುಕ್ತದ ಪರ ವಾದಿಸಿದ ವಕೀಲರು, ಕೆಲವು ಕೇಸ್‍ಗಳಲ್ಲಿ ಎಫ್‍ಐಆರ್‍ಗಳನ್ನು ವೆಬ್‍ಸೈಟ್‍ನಲ್ಲಿ ಹಾಕಿದ ನಂತರ ಅದು ಆರೋಪಿಗಳಿಗೆ ತಿಳಿಯಲಿದೆ. ಇದರಿಂದ, ಸಾಕ್ಷ್ಯಕ್ಕೆ ಅಡ್ಡಿಯಾಗುವ ಸಂಭವವಿರುತ್ತದೆ ಎಂದು ಪೀಠಕ್ಕೆ ತಿಳಿಸಿದರು. 

ಆರೋಪಿಯ ಹಕ್ಕು, ಸಮಾನತೆಯ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ಸೂಕ್ಷ್ಮ ಕೇಸ್‍ಗಳಲ್ಲಿ ಎಫ್‍ಐಆರ್ ಗಳನ್ನು ವೆಬ್‍ಸೈಟ್‍ನಲ್ಲಿ ಹಾಕಲು ಲೋಕಾಯುಕ್ತ ಪೊಲೀಸರು ತಡ ಮಾಡುತ್ತಿದ್ದಾರೆ. ಬೇರೆ ಕೇಸ್‍ಗಳಲ್ಲಿ ಸುಪ್ರೀಂಕೋರ್ಟ್‍ನ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ ಎಂದು ಪೀಠಕ್ಕೆ ಹೇಳಿದರು.

Similar News