ಹಕ್ಕುಪತ್ರ ಕೊಟ್ಟು ಈಗ ಡಿನೋಟಿಫಿಕೇಷನ್ ಸರಿಯಿಲ್ಲ ಅಂದ್ರೆ ಹೇಗೆ: ಸಂಸದ ರಾಘವೇಂದ್ರಗೆ ಬಿ.ಎ ರಮೇಶ್ ಹೆಗಡೆ ಪ್ರಶ್ನೆ

Update: 2022-12-01 17:41 GMT

ಶಿವಮೊಗ್ಗ(ಡಿ.01): ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರು ದ್ವಿಮುಖ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು  ಕೆಪಿಸಿಸಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕರಾದ  ಬಿ.ಎ ರಮೇಶ್ ಹೆಗಡೆ ಆರೋಪಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ನವರು ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡಲು 56 ಡಿನೋಟಿಫಿಕೇಷನ್ ಮಾಡಲಾಗಿತ್ತು ಎಂದರು.

26-06-2015 ಹಾಗೂ 28-10-2016 ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥ ರೈತರುಗಳಿಗೆ ವಿವಿಧ ಅರಣ್ಯ ಪ್ರದೇಶದಡಿ ಪುನರ್ವಸತಿ ಕಲ್ಪಿಸಲು  ಅರಣ್ಯ ಪರಿಸರ ಜೀವಿ ಶಾಸ್ತ್ರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜನಪ್ರತಿನಿದಿಗಳ ಸಭೆಯಲ್ಲಿ ಅಂದು ಶಾಸಕರಾಗಿದ್ದ ರಾಘವೇಂದ್ರ ಅವರು ಭಾಗವಹಿಸಿದ್ದರು.ಅಂದು ಡಿನೋಟಿಫಿಕೇಷನ್ ಸರಿಯಿಲ್ಲ ಅಂತ  ಯಾಕೆ ಪ್ರಸ್ತಾಪ ಮಾಡಲಿಲ್ಲ .ಈಗ ತಪ್ಪಾಗಿದೆ ಅಂತ ಆಕ್ಷೇಪಣೆ ಮಾಡುತ್ತಿದ್ದಾರೆ.ಅವರಿಗೆ ಅರಿವಿನ ಕೊರತೆ ಇದಿಯಾ ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ 16-01-2018 ರಲ್ಲಿ  ಶಿಕಾರಿಪುರ ತಾಲೂಕಿನ ಕಟ್ಟಿಗೆಹಳ್ಳ ಗ್ರಾಮದಲ್ಲಿ ಸುಮಾರು 250ಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು.ಅಂದು ರಾಘವೇಂದ್ರ ಅವರೇ ತಮ್ಮ ಅಮೃತ ಹಸ್ತದಿಂದ ಹಕ್ಕುಪತ್ರ ವಿತರಿಸಿದ್ದರು.ಅವತ್ತಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕಾಗೋಡು ತಿಮ್ಮಪ್ಪ ಅವರನ್ನು ಹೊಗಳಿ ಇವತ್ತು  ಯಾಕೆ ಆಕ್ಷೇಪಣೆ ಮಾಡುತ್ತೀದ್ದೀರಿ.ಇದು ದ್ವಿಮುಖ ನಡೆ ಅಲ್ಲವೇ ಎಂದು ಪ್ರಶ್ನಿಸಿದರು.

ಈಗ ಅರಣ್ಯ ಹಕ್ಕುಕಾಯ್ದೆ,ಅರಣ್ಯ ಸಂರಕ್ಷಣಾ ಕಾಯ್ದೆ 1980,ಅರಣ್ಯ ಭೂಮಿ ಇಂಡೀಕರಣ ಸರಿಯಿಲ್ಲ ಅಂತ ಹೇಳುತ್ತೀದ್ದಿರಿ.ಮಲೆನಾಡಿನ ರೈತರ ಮೇಲೆ ಡಾ.ಕಸ್ತೂರಿ ರಂಗನ್ ವರದಿ ತೂಗು ಕತ್ತಿ ನೇತಾಡುತ್ತಿದ್ದೆ.ರಾಘವೇಂದ್ರ ಅವರು  ಮೂರು ಬಾರಿ ಸಂಸದರಾಗಿದ್ದಾರೆ.ಈ ಬಗ್ಗೆ ಸಂಸತ್ತಿನಲ್ಲಿ ಯಾಕೆ ಚರ್ಚಿಸಿಲ್ಲ. ಈಗ ಕಾಂಗ್ರೆಸ್ ಸಂತ್ರಸ್ತರ ಪರವಾಗಿ ಜನಾಕ್ರೋಶ ವ್ಯಕ್ತಪಡಿಸಿದ ಮೇಲೆ ನಿದ್ರೆಯಿಂದ ಎಚ್ಚೆತ್ತವರಂತೆ ಬಡಬಡಿಸುತ್ತಿದ್ದಾರೆ  ಎಂದರು.

''ಯಡಿಯೂರಪ್ಪ ಸರ್ಕಾರದಿಂದ ಭೂಗಳ್ಳರ ಪಟ್ಟಿ:''

ಉಳುವವನೆ ಭೂಮಿಯ ಒಡೆಯ ,ಭೂಸುಧಾರಣೆ ಶಾಸನ 1974,ಸರ್ಕಾರಿ ಭೂಮಿ ಸಾಗುವಳಿ ಕಾಯ್ದೆ,ನಮೂನೆ 53-57,ಸೆಕ್ಷನ್ 94(ಎ)(ಬಿ)(ಸಿ), ಕರ್ನಾಟಕ ಭೂಕಂದಾಯ ಕಾಯ್ದೆ 1964 ಹಾಗೂ ಕೇಂದ್ರ ಅರಣ ಕಾಯ್ದೆ 2006,ಸೊಪ್ಪಿನ ಬೆಟ್ಟ,ಕಾನು ಸಕ್ರಮಗೊಳಿಸುವ  ಮೂಲಕ ಭೂಮಿಯ ಹಕ್ಕಿನ ಶಾಸನಗಳನ್ನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ.ಆದರೆ  ಬದುಕಿಗಾಗಿ  ಸರ್ಕಾರಿ ಭೂಮಿ ಸಾಗುವಳಿ ಮಾಡಿಕೊಂಡ ರೈತರಿಗೆ ಭೂಗಳ್ಳರು ಎಂಬ ಹಣೆಪಟ್ಟಿ ಕಟ್ಟಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಸೇರಿದ್ದು ಎಂದರು.

ಸೆಕ್ಷನ್ 192(ಎ) ಕರ್ನಾಟಕ ಭೂ ಕಂದಾಯ ಕಾಯ್ದೆ -1964 ,ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ -2011, ಅರಣ್ಯ ಭೂಮಿ ಇಂಡೀಕರಣ 2012 ಜಾರಿಗೆ ತಂದಿದೆ ಯಡಿಯೂರಪ್ಪ  ನೇತೃತ್ವದ ಸರ್ಕಾರ. 2011 ರಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತಂದು ರೈತರನ್ನು ಜೈಲಿಗೆ ಕಳಿಸಿದ್ದು, ಬಿಜೆಪಿ ಸರ್ಕಾರ. ಸೊಪ್ಪಿನಬೆಟ್ಟ, ಕುಮ್ಕಿ, ಬ್ಯಾಣ ಮೊದಲಾದ ಸ್ವರೂಪದ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಿದ್ದು, ಯಡಿಯೂರಪ್ಪ ನೇತೃತ್ವದ ಸರ್ಕಾರ. ರೈತರು ಜೈಲಿಗೆ ಹೋಗಲು ಇವರೇ ನೇರ ಕಾರಣವಾಗಿದ್ದಾರೆ ಎಂದರು.

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ತೋರಿದ ಕಾಳಜಿಯನ್ನು ಶರಾವತಿ ಸಂತ್ರಸ್ತರಿಗೆ ತೋರಿಸಿದ್ದರೆ ಇಷ್ಟರಲ್ಲಿಯೇ ಸಮಸ್ಯೆ ಪರಿಹಾರವಾಗುತ್ತಿತ್ತು. ಡಿನೋಟಿಫಿಕೇಶನ್ ವಿರುದ್ಧವಾಗಿ ತೀರ್ಪು ಬಂದು ಒಂದೂವರೆ ವರ್ಷವಾದರೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದರು.

ಶರಾವತಿ ಮುಳುಗಡೆ ಸಂತ್ರಸ್ಥರ ಜಾಗೃತ ಸಮಿತಿ ಸಂಚಾಲಕ ಆರ್. ಪ್ರಸನ್ನಕುಮಾರ್ ಮಾತನಾಡಿ,ಶರಾವತಿ ಮುಳುಗಡೆ ಸಂತ್ರಸ್ಥರ ಪಾದಯಾತ್ರೆ ಹಾಗೂ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯಕೊಡಿಸಿದ್ದೇವೆ.ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ‌ ನಂತರ ತಾರ್ಕಿಕ ಅಂತ್ಯ ಕಾಣಿಸುವ ಭರವಸೆ ನೀಡಿದ್ದಾರೆ.ಕಾಗೋಡು ತಿಮ್ಮಪ್ಪನವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಮುಳುಗಡೆ ರೈತರ ಪರವಾಗಿದ್ದೇವೆ ಎಂದು ಸಾಬೀತು ಮಾಡಿದ್ದಾರೆ ಎಂದರು.

ನ.27ರಂದು ತೀರ್ಥಹಳ್ಳಿಗೆ  ಸಿಎಂ ಬಂದಾಗ ಮುಳುಗಡೆ ರೈತರು ಹೋಗಿರಲಿಲ್ಲ.ಅಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.ಕಾಂಗ್ರೆಸ್ ಪಾದಯಾತ್ರೆಗೆ ಮುಳುಗಡೆ ರೈತರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್, ಎನ್.ಪಿ ಧರ್ಮರಾಜ್  ಮತ್ತಿತರರು ಇದ್ದರು.

Similar News