ಮುಳಬಾಗಿಲು | ಬೈಕ್‌ ಹಿಂದಿಕ್ಕಿದಕ್ಕೆ ಮರಕ್ಕೆ ಕಟ್ಟಿ ಹಲ್ಲೆ; ನೊಂದ ದಲಿತ ಯುವಕ ಆತ್ಮಹತ್ಯೆ: ಆರೋಪ

ನಾಲ್ವರ ವಿರುದ್ಧ FIR

Update: 2022-12-02 05:15 GMT

ಮುಳಬಾಗಿಲು (ಕೋಲಾರ) ಡಿ.1: ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನೋರ್ವನನ್ನು ಮರಕ್ಕೆ ಕಟ್ಟಿ ಥಳಿಸಿದ್ದರಿಂದ ಆತ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.  

ಬೇವಹಳ್ಳಿಯ ಉದಯ್ ಕಿರಣ್ ಮೃತ ಯುವಕನಾಗಿದ್ದು, ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. 

ಮುಳಬಾಗಿಲು ತಾಲೂಕಿನ  ಬೈರಕೂರು ಸಮೀಪದ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗಕ್ಕೆ ಸೇರಿದ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ, ಮತ್ತು ಮುನಿವೆಂಕಟಪ್ಪ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲೇನಿದೆ?:  ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ರವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗಾರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ, ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ, ಮತ್ತು ಮುನಿವೆಂಕಟಪ್ಪ ಬಳಿ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನಂತರ ತನ್ನ ವಾಹನ ಮತ್ತು ಮೊಬೈಲ್ ಕೇಳಲು ಹೋದ ಉದಯ್ ಕಿರಣ್ ನನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಮರಕ್ಕೆ ಕಟ್ಟಿ ಹಾಕಿ, ಹೊಡೆದು, ಜಾತಿ ನಿಂದನೆ ಮಾಡಿ ಅತಿಹೀನವಾಗಿ ಅವಮಾನಿಸಿದ್ದಾರೆ. ಈ ಕಾರಣಕ್ಕೆ ಉದಯ್ ಕಿರಣ್ ಅವಮಾನ ತಾಳಲಾರದೇ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. 

Similar News