KGF 2 ಹಾಡಿನ ದುರ್ಬಳಕೆ ಆರೋಪ: ರಾಹುಲ್ ಗಾಂಧಿ ಸೇರಿ ಮೂವರಿಗೆ ಕರ್ನಾಟಕ ಹೈಕೋರ್ಟ್ ನಿಂದ ನೊಟೀಸ್
Update: 2022-12-02 14:37 IST
ಬೆಂಗಳೂರು, ಡಿ.2: ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಸಿನೆಮಾದ ಹಾಡಿನ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರಿಗೆ ಕರ್ನಾಟಕ ಹೈಕೋರ್ಟ್ (High Court of Karnataka) ವಿಭಾಗೀಯ ಪೀಠವು ನೊಟೀಸ್ ಜಾರಿ ಮಾಡಿದೆ.
ನಗರದ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯು ರಾಹುಲ್ ಗಾಂಧಿ, ಸುಪ್ರಿಯಾ ಶ್ರೀನಾಥೆ ಮತ್ತು ಜೈರಾಂ ರಮೇಶ್ ಅವರ ವಿರುದ್ಧ ಕೆಜಿಎಫ್ 2 ಹಾಡನ್ನು ಟ್ವಿಟರ್ ಖಾತೆಯಲ್ಲಿ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆ ಮಾಡಿರುವ ಕುರಿತು ಏಕಸದಸ್ಯ ಪೀಠದ ಆದೇಶ ಪಾಲಿಸದಿರುವುದನ್ನು ಪ್ರಶ್ನಿಸಿ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನಾಥೆ ಅವರಿಗೆ ನೋಟಿಸ್ ಜಾರಿಗೊಳಿಸಿ, ಜನವರಿ 12ಕ್ಕೆ ವಿಚಾರಣೆ ಮುಂದೂಡಿತು.