ಸಿದ್ದರಾಮಯ್ಯ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ...: ಎಚ್.ಡಿ ಕುಮಾರಸ್ವಾಮಿ

''ಸ್ಪಷ್ಟ ಬಹುಮತ ಸಿಕ್ಕರೆ ದಲಿತ ಸಿಎಂ ಮಾಡಲು ಪಕ್ಷ ಹಿಂಜರಿಯುವುದಿಲ್ಲ''

Update: 2022-12-02 11:41 GMT

ತುಮಕೂರು. ಡಿ.2: ''ಮಾಜಿ ಮುಖ್ಯಮಂತ್ರಿ, ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು  ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ, ಹಾಗಾಗಿ ಅವರ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ'' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ''ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟದ ಬಗ್ಗೆ ಲಘುವಾಗಿ ಮಾತಾಡುವುದಿಲ್ಲ'' ಎಂದು ಹೇಳಿದರು. 

'ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕರೆ ದಲಿತ ನಾಯಕನನ್ನು ಮುಖ್ಯಮಂತ್ರಿ ಮಾಡಲು ಹಿಂಜರಿಯುವುದಿಲ್ಲ. ಸುಮಾರು 40 ವರ್ಷಗಳ ಹಿಂದೆ ಪಕ್ಷದ ವರಿಷ್ಠ ಮತ್ತು ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಅವರು ಹಾಸನ ಜಿಲ್ಲಾ ಪಂಚಾಯತ್​ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಿದ್ದರು. ಜೆಡಿಎಸ್ ವಿರೋಧಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು' ಕುಮಾರಸ್ವಾಮಿ ತಿಳಿಸಿದರು. 

''ಈಗ ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೋ ಅಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನೊಂದು ಕ್ಷೇತ್ರ ಮಾತ್ರ ಬಾಕಿಯಿದೆ ಎಂದ ಅವರು, ಒಂದೊಂದು ಕಡೆ ಲೋಪದೋಷಗಳು ಆದಾಗ ಮಾತ್ರ ಅಂತಹ ಕಡೆಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಆಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ ಅಷ್ಟೆ. ಅದನ್ನು ಹೊರತುಪಡಿಸಿದರೆ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.
 

ಇದನ್ನೂ ಓದಿ: ವೋಟರ್ ಐಡಿ ಹಗರಣ: 'DeleteBJPNotVoterID' ಅಭಿಯಾನ ಆರಂಭಿಸಿದ ಕಾಂಗ್ರೆಸ್

Similar News