ಪರಿಶಿಷ್ಟರ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ನಿರ್ಲಕ್ಷ್ಯ ಸಹಿಸುವುದಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-12-02 13:31 GMT

ಬೆಂಗಳೂರು, ಡಿ. 2: ‘ಪರಿಶಿಷ್ಟ ಜಾತಿ(ಎಸ್‍ಸಿ) ಮತ್ತು ಪರಿಶಿಷ್ಟ ವರ್ಗ(ಎಸ್‍ಟಿ)ದವರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಪರಿಶಿಷ್ಟರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ನಿರ್ಲಕ್ಷ್ಯ ಸಹಿಸುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Shrinivas Poojari) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಎಸ್‍ಸಿಪಿ, ಟಿಎಸ್‍ಪಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 35 ಇಲಾಖೆಗಳ ನೋಡಲ್ ಏಜೆನ್ಸಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಹಾಗೂ ಉತ್ತಮ ಪ್ರಗತಿ ಸಾಧಿಸಲಾಗಿದೆ’ ಎಂದು ವಿವರಣೆ ನೀಡಿದರು.

‘ಈ ಹಿಂದಿನ ವರ್ಷಗಳಂತೆ 2022-23ನೆ ಸಾಲಿನಲ್ಲಿಯೂ ಪ್ರಗತಿಸಾಧಿಸಲಾಗಿದೆ. ಎಸ್‍ಸಿಪಿ/ಟಿಎಸ್‍ಪಿ ಅನುದಾನವನ್ನು ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಉಪಯೋಗಿಸುತ್ತಿದ್ದು ಪ್ರಗತಿಯಲ್ಲಿ ಹಿನ್ನಡೆ ಆಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

2022-223ನೆ ಸಾಲಿನಲ್ಲಿ ಎಸ್‍ಸಿಎಸ್‍ಪಿ ಅಡಿ ವಿವಿಧ ಇಲಾಖೆಗಳಿಗೆ ಒಟ್ಟು 20,843 ಕೋಟಿ ರೂ. ಹಂಚಿಕೆ ಮಾಡಿದ್ದು, ನವೆಂಬರ್ ಅಂತ್ಯಕ್ಕೆ 9,298 ಕೋಟಿ ರೂ.(ಶೇ.45) ಪ್ರಗತಿಯಾಗಿರುತ್ತದೆ. ಟಿಎಸ್‍ಪಿ ಅಡಿಯಲ್ಲಿ 8,322 ಕೋಟಿ ರೂ.ಹಂಚಿಕೆಯಾಗಿದ್ದು, 2,928 ಕೋಟಿ ರೂ.(ಶೇ.35) ಪ್ರಗತಿಯಾಗಿರುತ್ತದೆ. ಒಟ್ಟಾರೆ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅಡಿ ಹಂಚಿಕೆಯಾಗಿರುವ 29,165 ಕೋಟಿ ರೂ.ಗಳಲ್ಲಿ 12,227 ಕೋಟಿ ರೂ.ವೆಚ್ಚವಾಗಿದ್ದು ಶೇ.42ರಷ್ಟು ಪ್ರಗತಿ ಸಾಧಿಸಲಾಗಿದೆ. ಬಿಡುಗಡೆಗೆ ಹೋಲಿಸಿದ್ದಲ್ಲಿ ಶೇ.89ರಷ್ಟು ಪ್ರಗತಿಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ 3 ತಿಂಗಳಿಗೊಮ್ಮೆ ನಿಯಮಿತವಾಗಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ನೋಡಲ್ ಏಜೆನ್ಸಿ ಸಭೆ ನಡೆಸುತ್ತಿದ್ದು, ಅನುಷ್ಠಾನಕ್ಕೆ 35 ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಲಾಗುತ್ತದೆ. ಅಲ್ಲದೆ, ಅನುಷ್ಠಾನದ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಸಾಮಾಜಿಕ ಪರಿಶೋಧನೆ ಮತ್ತು ಮೌಲ್ಯಮಾಪನವನ್ನು ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Similar News