ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸಮಾಧಿ: ವಿ.ಎಸ್.ಉಗ್ರಪ್ಪ

Update: 2022-12-02 13:50 GMT

ಬೆಂಗಳೂರು, ಡಿ.2: ರಾಜ್ಯ ಹಾಗೂ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರಕಾರ ಆಡಳಿತದಲ್ಲಿದ್ದು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರ ನಡೆಸುತ್ತಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವರಿಂದ ನಡೆದಿದೆ ಎಂದು ಕಿಡಿಗಾರಿದರು. 

ಪ್ರಾಥಮಿಕ ಹಾಗೂ ಮಧ್ಯಮ ಶಾಲೆಗಳಲ್ಲಿ 22.56 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 14.89 ಲಕ್ಷ ಶಾಲೆಗಳಲ್ಲಿ ಈ ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ 10.22 ಲಕ್ಷ ಸರಕಾರಿ ಶಾಲೆಗಳಿವೆ. ಒಂದರಿಂದ ಎಂಟನೇ ತರಗತಿಯವರೆಗಿನ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿ ಸರಕಾರ ನಿಲ್ಲಿಸಿದೆ. ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಮೋದಿಯನ್ನು ಆಧುನಿಕ ಭಸ್ಮಾಸುರ ಎಂದು ಕರೆಯುತ್ತಿರುತ್ತೇನೆ ಎಂದು ಉಗ್ರಪ್ಪ ಹೇಳಿದರು.

2017-18ರಲ್ಲಿ 1.61 ಲಕ್ಷ ಕೋಟಿಯಷ್ಟು, 2018-19 ರಲ್ಲಿ 2.36 ಲಕ್ಷ ಕೋಟಿ, 2019-20 ರಲ್ಲಿ 2.34 ಲಕ್ಷ ಕೋಟಿ, 2020-21ರಲ್ಲಿ 2.02 ಲಕ್ಷ ಕೋಟಿ, 2021- 22 ರಲ್ಲಿ 1.57 ಲಕ್ಷ ಕೋಟಿ ಈ ಹೀಗೆ ಮೋದಿ ಸರಕಾರ 2015 ರಿಂದ 2021 ರವರೆಗೆ ಶ್ರೀಮಂತರ ಸುಮಾರು 10 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದೆ ಎಂದು ಅವರು ಹೇಳಿದರು.

ಆದರೆ, ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಕೇವಲ 400 ಕೋಟಿ ಮಾತ್ರ. ಇದನ್ನು ನೀಡಲು ಸಾಧ್ಯವಾಗಿಲ್ಲ. ಬಡ ಮಕ್ಕಳ ಶಿಕ್ಷಣದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿರುವ ಇವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೆ ಈ ವರ್ಷ 29,165 ಕೋಟಿ ನೀಡಿದ್ದು, ಈ ಪೈಕಿ ಶೇ.15ಕ್ಕಿಂತ ಕಡಿಮೆ ಅನುದಾನ ಬಳಕೆಯಾಗಿದೆ. ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಶೇ.2.2, ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶೇ.4.5ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ ಕುರಿತು ಸುಗ್ರೀವಾಜ್ಞೆ ಹೊರಡಿಸಿರುವ ಸರಕಾರ, ಈವರೆಗೆ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ಅವರು ಆರೋಪಿಸಿದರು.

ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ತಮ್ಮ ಭಾಷಣದಲ್ಲಿ ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎನ್ನುವ ಮೂಲಕ ಸ್ತ್ರೀ ಸಮುದಾಯಕ್ಕೆ ಅಪಚಾರ ಎಸಗಿದ್ದಾರೆ. ಬಿಜೆಪಿ ಅಥವಾ ಆರೆಸ್ಸೆಸ್ ಹಿಂದುತ್ವದ ಪರವಾಗಿಲ್ಲ, ಅವರು ಮನುವಾದದ ಪರವಾಗಿದ್ದಾರೆ. ಸ್ತ್ರೀಯರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣುತ್ತಾರೆ ಎಂಬುದು ಶ್ರೀರಾಮುಲು ಮಾತಿನ ಮೂಲಕ ಸ್ಪಷ್ಟವಾಗಿದೆ ಎಂದು ಉಗ್ರಪ್ಪ ಟೀಕಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಉಪಸ್ಥಿತರಿದ್ದರು.

Similar News