ಕೊಡ್ಲಿಪೇಟೆ | ಆಕಸ್ಮಿಕ ಬೆಂಕಿ ಅವಘಡ; ಮನೆಗೆ ಭಾಗಶಃ ಹಾನಿ

Update: 2022-12-02 14:31 GMT

ಮಡಿಕೇರಿ ಡಿ.2 : ಆಕಸ್ಮಿಕ ಅಗ್ನಿ ಅನಾಹುತದಿಂದ ಮನೆಯೊಂದು ಸಂಪೂರ್ಣವಾಗಿ ಹಾನಿಗೀಡಾಗಿರುವ ಘಟನೆ ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಅಬ್ದುಲ್ ರೌಫ್ ಅವರ ವಾಸದ ಮನೆಯಲ್ಲಿ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ಮೇಲ್ಚಾವಣಿ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡು ಅಕ್ಕಪಕ್ಕದ ಮಂದಿ ಧಾವಿಸಿ ಬಂದು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳು, ಪೀಠೋಪಕರಣಗಳು, ದಾಖಲೆಗಳು ಸುಟ್ಟು ಕರಕಲಾಗಿತ್ತು.

ಅಗ್ನಿ ಅವಘಡ ಸಂಭವಿಸುವಾಗ ಅಬ್ದುಲ್ ರೌಫ್ ಹಾಗೂ ಅವರ ತಾಯಿ ಆಸಿಯಮ್ಮ ಮನೆಯಲ್ಲಿರಲಿಲ್ಲ . ಸ್ಥಳಕ್ಕೆ ಶನಿವಾರಸಂತೆ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಕಂದಾಯ ನಿರೀಕ್ಷಕ ಮನುಕುಮಾರ್, ಸ್ಥಳೀಯ ಚೆಸ್ಕಾಂ ಉಪ ವಲಯದ ಅಧಿಕಾರಿ ಹಿರೇಮಠ್ ಭೇಟಿ ನೀಡಿ ಪರಿಶೀಲಿಸಿದರು. 

ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಇಲಾಖೆಗಳು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಅಬ್ದುಲ್ ರೌಫ್ ಮನವಿ ಮಾಡಿದ್ದಾರೆ. 

Similar News