'ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ': ಪಂಚರತ್ನ ಯಾತ್ರೆ ವೇಳೆ ಮಗುವಿನ ಮೃತದೇಹವನ್ನು ಕಂಡು ಭಾವುಕರಾದ ಕುಮಾರಸ್ವಾಮಿ

Update: 2022-12-03 05:32 GMT

ಬೆಂಗಳೂರು, ಡಿ.2:  ಜೆಡಿಎಸ್ ಪಂಚರತ್ನ ಸಾಗುತ್ತಿದ್ದ ವೇಳೆ ಪೋಷಕರು ನೀರಿಗೆ ಬಿದ್ದು ಮೃತ ಪಟ್ಟ ಮಗುವಿನ ಮೃತದೇಹವನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವ ದೃಶ್ಯ ಕಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕರಾದ ಪ್ರಸಂಗ ನಡೆದಿದೆ. 

ಆಕಸ್ಮಿಕವಾಗಿ ನೀರಿನ ಸಂಪ್​ಗ ಬಿದ್ದು ಅಸ್ವಸ್ಥಗೊಂಡಿದ್ದ ನಾಲ್ಕು ವರ್ಷ ಮಗುವನ್ನು ಕೂಡಲೇ ಪೋಷಕರು ಕೊಡಿಗೇನಹಳ್ಳಿ ಗ್ರಾಮ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆನ್ನಲಾಗಿದ್ದು,  ಆದರೆ, ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ಬೇರೆ ಆಸ್ಪತ್ರೆಗ ಹೋಗಲು ಆ್ಯಂಬುಲೆನ್ಸ್‌ ಇದ್ದರೂ ಚಾಲಕನಿರಲಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. 

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಜ್ಯದಲ್ಲಿ ಆರೋಗ್ಯ ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ, ಯಾವ ಮಟ್ಟಕ್ಕೆ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮಧುಗಿರಿ ವಿಧಾನಸಭೆ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ನಡೆದ 4 ವರ್ಷದ ಬಾಲಕನ ದುರಂತ ಮರಣವೇ ಸಾಕ್ಷಿ. ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್ ಇದ್ದರೂ ಚಾಲಕನಿರಲಿಲ್ಲ.ಗ್ರಾಮೀಣ ಪ್ರದೇಶದ ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ ಇದು. ಆರೋಗ್ಯ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ ಇದು. ಕೇವಲ ಒಂದೇ ವಾರದಲ್ಲಿ ಇಂಥ 2 ಸಾವುಗಳು ಅಲ್ಲೇ ಆಗಿರುವುದು ರಾಜ್ಯ ಬಿಜೆಪಿ ಸರಕಾರ ತಲೆ ತಗ್ಗಿಸುವ ಸಂಗತಿ' ಎಂದು ಹೇಳಿದ್ದಾರೆ. 

''ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

''ನನ್ನ ನೇತೃತ್ವದ ಪಂಚರತ್ನ ರಥಯಾತ್ರೆ ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಗೆ ಬಂದಾಗ ನಾನು ಈ ದುರಂತವನ್ನು ಕಣ್ಣಾರೆ ಕಂಡೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಬಡಿದ ಅನಾರೋಗ್ಯದ ಸಾಕ್ಷಾತ್ಕಾರ ನನಗಾಯಿತು. ರೋಗಗ್ರಸ್ತ ಬಿಜೆಪಿ ಆಡಳಿತದಲ್ಲಿ ಆಸ್ಪತ್ರೆಗಳು ಸಾವಿನ ಕೂಪಗಳೇ ಆಗಿವೆ.ಆ ಕಂದನ ಸಾವಿಗೆ ನ್ಯಾಯ ಬೇಕಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ, ಆರೋಗ್ಯ ಸಚಿವರೇ ಹೊಣೆ. ಆತ್ಮಸಾಕ್ಷಿ ಎನ್ನುವುದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪಟದಿಂದ ಕಿತ್ತೊಗೆಯಬೇಕು'' ಎಂದು ಒತ್ತಾಯಿಸಿದ್ದಾರೆ. 

''ಅಲ್ಲದೇ ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿದೆ. ನೊಂದ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಮುಂದೆ ಎಲ್ಲಿಯೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ದುರ್ಮರಣ ಹೊಂದಿದ ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ'' ಎಂದು ಕುಮಾರಸ್ವಾಮಿ  ಟ್ವೀಟ್ ಮಾಡಿದ್ದಾರೆ. 

Similar News