ಮೈಸೂರು: ಸೇವಾ ನ್ಯೂನತೆ ಎಸಗಿದೆ ಎಸ್‍ಬಿಐ ಬ್ಯಾಂಕ್ ಗೆ 2 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ವೇದಿಕೆ

Update: 2022-12-02 16:36 GMT

ಮೈಸೂರು,ಡಿ.2: ಸೇವಾ ನ್ಯೂನತೆ ಎಸಗಿದ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರುವ ಮಾರ್ಕೆಟ್ ಬ್ರಾಂಚ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಶೋಕ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಮೈಸೂರಿನ ವಿಶ್ವೇಶ್ವರ ನಗರ ಎರಡನೇ ಹಂತದ ಸಿಐಟಿಬಿ ಕಾಲೋನಿಯ ಮಲ್ಲಿಗೆ ರಸ್ತೆಯ ನಿವಾಸಿ ರಾಮೋಜಿ ರಾವ್ ಅವರ ಮಗನಾದ ಮಾಜಿ ಯೋಧ ಕೃಷ್ಣೋಜಿ ರಾವ್ ಅವರು ಮನೆಯನ್ನು ಖರೀದಿ ಮಾಡಲು ಮತ್ತು ಆ ಮನೆಯನ್ನು ನವೀಕರಣ ಮಾಡುವ ಸಲುವಾಗಿ 2003 ಹಾಗೂ 2013 ರ ಸಮಯದಲ್ಲಿ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿದ್ದ  ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರ್ಕೆಟ್ ಬ್ರಾಂಚ್ ಹಾಗೂ ಅಶೋಕ ರಸ್ತೆಯ ಬ್ರಾಂಚ್ ನಲ್ಲಿ ರೂ.3,55,000/- ಹಾಗೂ ರೂ.6,40,000/- ಗಳನ್ನು ಸಾಲವಾಗಿ ಪಡೆದಿದ್ದರು.

ಸಾಲ ಮಂಜೂರು ಮಾಡುವ ಸಮಯದಲ್ಲಿ ಕೃಷ್ಣೋಜಿ ರಾವ್ ತಮ್ಮ ಮನೆಯ ಹಕ್ಕು ಪತ್ರ, ಕ್ರಯಪತ್ರ ಹಾಗೂ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನವಾಯಿತು.

ಕೃಷ್ಣೋಜಿ ರಾವ್ ಅವರು 31.07.2021 ರಲ್ಲಿ ಸೇವೆಯಿಂದ/ಸೇನೆಯಿಂದ ನಿವೃತ್ತಿಯಾದ ನಂತರ ಬಂದ ಹಣದ ಮೊತ್ತದಿಂದ 10.08.2021ರಂದು ಬ್ಯಾಂಕಿನಿಂದ ಪಡೆದ ಸಾಲವನ್ನು ಪೂರ್ತಿಯಾಗಿ,ಗೌರವಯುತವಾಗಿ ತೀರಿಸಿ ಸಾಲದ ಖಾತೆಯನ್ನೂ ಮುಕ್ತಿಗೊಳಿಸಿದ್ದರು. ಈ ವಿಚಾರವಾಗಿ10.08.2021ರಂದು ಎಸ್ ಬಿ ಐ ಸಾಲ ತೀರುವಳಿ ಪತ್ರವನ್ನೂ ನೀಡಿತ್ತು.

ಸಾಲ ತೀರಿಸಿದ ಪ್ರಯುಕ್ತ ತಾನು ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ತನ್ನ ಮನೆಯ ಹಕ್ಕು ಪತ್ರ ಕ್ರಯ ಪತ್ರ ಹಾಗೂ ಖಾತಾ ಸಂಬಂದಿ ದಾಖಲೆಗಳನ್ನು ಹಿಂದಿರುಗಿಸುವಂತೆ ಕೋರಿ ಕೃಷ್ಣೋಜಿ ರಾವ್ ಅವರು 26.10.2021ರಂದು ಬ್ಯಾಂಕಿಗೆ ಮನವಿ ಪತ್ರ ಸಲ್ಲಿಸಿದರೂ ಕೂಡ ಎಸ್ ಬಿ ಐ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುವ ಜೊತೆಗೆ ಕೃಷ್ಣೋಜಿ ರಾವ್ ರವರಿಗೆ ಮನೆಯ ದಾಖಲೆಗಳನ್ನು ಹಿಂದಿರುಗಿಸಲೇ ಇಲ್ಲ. ಇದರಿಂದ ಮನನೊಂದ ಕೃಷ್ಣೋಜಿ ರಾವ್ ಅವರು ತನ್ನ ಮನೆಯ ಹಕ್ಕುಪತ್ರ, ಕ್ರಯಪತ್ರ ಹಾಗೂ ಖಾತಾ ಸಂಬಂಧಿ ದಾಖಲೆಗಳನ್ನು ಹಿಂದಿರುಗಿಸಲು ನಿರ್ದೇಶನ ನೀಡುವ ಜೊತೆಗೆ ತನಗೆ ಮಾನಸಿಕ ಹಿಂಸೆ ನೀಡಿ ಸೇವಾ ನ್ಯೂನತೆ ಎಸಗಿದ ತಪ್ಪಿಗಾಗಿ ರೂ.16,00,000ಗಳನ್ನು ಖರ್ಚು ಸಹಿತ ಪರಿಹಾರ  ನೀಡುವಂತೆ ಬ್ಯಾಂಕಿಗೆ ಆದೇಶಿಸಬೇಕೆಂದು ಕೋರಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡೂ ಬ್ರಾಂಚ್ ಗಳು  ಸೇವಾ ನ್ಯೂನತೆ ಎಸಗಿವೆ ಎಂದು ತೀರ್ಮಾನಿಸಿ ಕೃಷ್ಣೋಜಿ ರಾವ್ ಅವರು ಸಾಲ ಪಡೆಯುವಾಗ ಬ್ಯಾಂಕಿಗೆ ಭದ್ರತೆಯಾಗಿ ನೀಡಿದ್ದ ತಮ್ಮ ಮನೆಯ ಹಕ್ಕು ಪತ್ರ,ಕ್ರಯಪತ್ರ ಹಾಗೂ ಖಾತಾ ಸಂಬಂಧಿ ದಾಖಲೆಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸುವಂತೆ ಆದೇಶಿಸುವ ಜೊತೆಗೆ ಸೇವಾ ನ್ಯೂನತೆ ಎಸಗಿದ ತಪ್ಪಿಗಾಗಿ 2 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ವಾರ್ಷಿಕ 6% ಬಡ್ಡಿಯೊಂದಿಗೆ ಪಾವತಿಸುವಂತೆ ಎಸ್ ಬಿಐ ನ ಎರಡೂ ಬ್ರಾಂಚುಗಳಿಗೆ ನಿರ್ದೇಶಿಸಿದೆ.

ಅಲ್ಲದೆ ಪ್ರಕರಣದ ಖರ್ಚಿನ ಬಾಬ್ತು ರೂ 5,000 ಗಳನ್ನು 2 ತಿಂಗಳೊಳಗೆ ಪಾವತಿಸುವಂತೆ ಆದೇಶಿದೆ. ಇದಕ್ಕೆ ತಪ್ಪಿದಲ್ಲಿ ವಾರ್ಷಿಕ ರೂ 2,05,000 ಕ್ಕೆ ವಾರ್ಷಿಕ 10% ಬಡ್ಡಿ ಕೊಡಬೇಕಾಗುತ್ತದೆಂದೂ ಗ್ರಾಹಕರ ವೇದಿಕೆಯು ಎಚ್ಚರಿಸಿದೆ. ಫಿರ್ಯಾದುದಾರ ಕೃಷ್ಣೋಜಿ ರಾವ್ ಅವರ ಪರವಾಗಿ ವಕೀಲರಾದ ಪ್ರತಾಪರುದ್ರಮೂರ್ತಿ ಹಾಗೂ ಸುಂದರದಾಸ್.ಡಿ ವಕಾಲತ್ತು ವಹಿಸಿದ್ದರು.

Similar News