ರೌಡಿ ಲಿಸ್ಟ್ ನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು, ನನ್ನ ಹೆಸರೂ ಇತ್ತು..: ಸಿ.ಟಿ.ರವಿ

''ನಮ್ಮದು ಮಾಸ್ ಪಾರ್ಟಿ, ನಮ್ಮ ಪಕ್ಷದ ನೀತಿ- ನಿಯತ್ತು ಬದಲಾಗಿಲ್ಲ''

Update: 2022-12-03 10:47 GMT

ಬೆಂಗಳೂರು, ಡಿ.3: ರೌಡಿ ಲಿಸ್ಟ್ ನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು. ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (C T Ravi) ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ಸ್ಪಷ್ಟನೆ ನೀಡಿದ್ದಾರೆ' ಎಂದು ತಿಳಿಸಿದರು. 

''ಸಿಎಂ ಆಗಿದ್ದ ದೇವರಾಜ ಅರಸು ಅವರು ತಮ್ಮ ಚೇಂಬರ್‍ನಲ್ಲಿ ನಟೋರಿಯಸ್ ರೌಡಿಗಳ ಜೊತೆ ಸಭೆ ನಡೆಸಿದ್ದರು. ಅಂಥ ಕೆಲಸ ನಾವು ಮಾಡುವುದಿಲ್ಲ. ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್‍ಗೆ ಇದೇ ಕಾರಣಕ್ಕೇ ನೀಡಿದ್ದಾರೆ'' ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

''ನಮ್ಮದು ಮಾಸ್ ಪಾರ್ಟಿ. ನಮ್ಮ ಪಕ್ಷದ ನೀತಿ- ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗಿದೆ; ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ನಾನು ಡಿ.ಕೆ.ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ‘ಆ ದಿನಗಳು’ ಅದನ್ನು ಹೇಳಿವೆ'' ಎಂದು ತಿಳಿಸಿದರು.

''ಅಭಿವೃದ್ಧಿ, ರಾಷ್ಟ್ರವಾದ ನಮ್ಮ ಅಜೆಂಡ. ಈ ವಿಷಯದಲ್ಲಿ ಹೊಂದಾಣಿಕೆ ಇಲ್ಲ. ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ಬೊಮ್ಮಾಯಿಯವರ ನಿಲುವನ್ನು ಸ್ವಾಗತಿಸುತ್ತೇನೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಂವಿಧಾನಕರ್ತೃ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್ ನಿಲುವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಬಿಜೆಪಿ ಯಾವುದೇ ಬಗೆಯ ಅಸ್ಪೃಷ್ಯತೆಯನ್ನು ಬೆಂಬಲಿಸುವುದಿಲ್ಲ; ಅಸ್ಪೃಷ್ಯತೆಗೆ ನಮ್ಮಲ್ಲಿ ಜಾಗ ಇಲ್ಲ. ಜಾತಿ ರಾಜಕಾರಣ ಇದ್ದಾಗ ದಲಿತ ದೌರ್ಜನ್ಯ ಹೆಚ್ಚಾಗಿರುತ್ತದೆ. ಹಿಂದುತ್ವ ಇದ್ದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ಇದೆ ಎಂದು ನುಡಿದರು.

ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಿದೆ. ಭಾಷೆ ಬೇರೆಬೇರೆ ಇದ್ದರೂ ಭಾಷೆಯ ಒಳಗೂ ಸಂಬಂಧಗಳಿವೆ. ಸಂಬಂಧ ಗಟ್ಟಿ ಮಾಡಬೇಕು; ಸಂಘರ್ಷ ಹುಟ್ಟು ಹಾಕುವುದಲ್ಲ ಎಂದು ತಿಳಿಸಿದರು. ಅವರೂ ಬಹುದೇವತಾರಾಧನೆ, ಪ್ರಕೃತಿ ಆರಾಧಿಸುವವರು. ಆದರೆ, ಗಡಿ ವಿಚಾರವನ್ನು ಕಗ್ಗಂಟಾಗಿ ಪರಿವರ್ತಿಸಿದ್ದಾರೆ. ಆ ಕಗ್ಗಂಟನ್ನು ಒಂದೊಂದಾಗಿ ಬಿಡಿಸಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ಬಳಿಕ ವಿಜಯಸಂಕಲ್ಪ ಯಾತ್ರೆ ನಡೆಸಲಾಗುವುದು. 150ಕ್ಕೂ ಅಧಿಕ ಶಾಸಕರ ಸ್ಥಾನ ಗೆಲ್ಲಲು ಎಲ್ಲ ತಂತ್ರಗಾರಿಕೆ ಮತ್ತು ಪ್ರಯತ್ನವನ್ನು ಮಾಡಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮ, ಕಲ್ಬುರ್ಗಿ ಗ್ರಾಮಾಂತರ ಶಾಸಕ ಬಸವರಾಜ ಮತ್ತಿಮೋಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Full View

Similar News