ಎಚ್.ವಿಶ್ವನಾಥ್ ವಿರುದ್ಧ ಹೇಳಿಕೆ: ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಗೊಳಿಸುವಂತೆ ಪತ್ರ ಚಳವಳಿ

Update: 2022-12-03 14:55 GMT

ಮೈಸೂರು,ಡಿ.3: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ) ಒತ್ತಾಯಿಸಿದರು.

ಹಿರಿಯ ರಾಜಕಾರಣಿ ಅಡಗೂರು ಎಚ್.ವಿಶ್ವನಾಥ್ ಅವರ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಲಘುವಾಗಿ ಹೇಳಿಕೆ ನೀಡಿದ್ದು, ಅವರ  ವಿರುದ್ಧ ಮುಖ್ಯಮಂತ್ರಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಮೈಸೂರು ಮಹಾನಗರ ಪಾಲಿಕೆ ಕಚೇರಿ ಎದುರು ಹಮ್ಮಿಕೊಂಡಿದ್ದ ಪತ್ರ ಚಳವಳಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನ ಕಲಾಮಂದಿರ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ, ಚಟು ವಟಿಕೆಗಳಿಗೆ ಮೀಸಲಾದ ಸಂಸ್ಥೆ. ಇಂತಹ ಸಂಸ್ಥೆಗೆ ಅಡ್ಡಂಡ ಕಾರ್ಯಪ್ಪ ಎಂಬ ಧರ್ಮ ವಿರೋಧಿ, ಕೋಮು ಮನಸ್ಥಿತಿ ಇರುವ ವ್ಯಕ್ತಿಯನ್ನು ನಿರ್ದೇಶಕನಾಗಿ ನೇಮಿಸಿರುವ ಸಂಸ್ಕೃತಿ ಇಲಾಖೆ ಸಚಿವರು ಮಾಡಿರುವ ನಿರ್ಧಾರದಿಂದ ರಂಗಾಯಣಕ್ಕೆ ಕಳಂಕ ಬಂದಿದೆ. ಅಡ್ಡಂಡ ಕಾರ್ಯಪ್ಪರವರು ಇದುವರೆಗೂ ಮಾಡಿರುವ ಕಾರ್ಯಗಳು ಅಡ್ಡದಾರಿಯಲ್ಲಿ ಸಾಗಿವೆ. ಅವರು ಇತ್ತೀಚೆಗಷ್ಟೇ ರಚಿಸಿರುವ ಟಿಪ್ಪು ನಿಜಕನಸುಗಳು ಎಂಬ ಕೃತಿಯಲ್ಲಿ ಟಿಪ್ಪು ಸುಲ್ತಾನ್ ಅವರ ಮುಖವನ್ನು ವಿರೂಪಗೊಳಿಸಿರುವುದು ಕಾರ್ಯಪ್ಪನವರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ಪ್ರತಿಫಲವಾಗಿ ಆ ಕೃತಿಯನ್ನು ಮಾರಾಟ ಮಾಡಲು ನ್ಯಾಯಾಲಯ ನಿರ್ಬಂಧ ವಿಧಿಸಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಕಾರಣರಾದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ವಿರುದ್ಧವೇ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿರುವುದು ತಪ್ಪು ಎಂದರು.

ಪತ್ರ ಚಳವಳಿಯಲ್ಲಿ ವೇದಿಕೆ ಅಧ್ಯಕ್ಷ ಝಾಕೀರ್ ಹುಸೇನ್, ಕಮಲಾ ಅನಂತರಾಮು, ಶಿವಪ್ಪ, ವಕೀಲ ಎ.ಆರ್.ಕಾಂತಾರಾಜು, ರದಿವುಲ್ಲಾ ಮುಂತಾದವರು ಉಪಸ್ಥಿತರಿದ್ದರು.

Similar News