ಬೆಂಗಳೂರು ವಿವಿ | 2ನೇ ಸ್ನಾತಕೋತ್ತರ ಪದವಿಗೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರಾಕರಣೆ; ವ್ಯಾಪಕ ಆಕ್ಷೇಪ

ಸುತ್ತೋಲೆ ವಾಪಸ್ ಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಒತ್ತಾಯ

Update: 2022-12-03 15:40 GMT

ಬೆಂಗಳೂರು, ಡಿ.3: 2022-23ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಹಾಸ್ಟೆಲ್ ಪ್ರವೇಶ ನೀಡುವ ಸಂದರ್ಭದಲ್ಲಿ ಎರಡನೆ ಸ್ನಾತಕೋತ್ತರ ಪದವಿಗೆ ಕಡ್ಡಾಯವಾಗಿ ಅವಕಾಶ ನೀಡಬಾರದೆಂದು ಬೆಂಗಳೂರು ವಿಶ್ವ ವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದು ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿದೆ.

ಸರಕಾರದ ಆದೇಶದನ್ವಯ ಒಂದು ಬಾರಿ ಸರಕಾರಿ ಅಥವಾ ವಿಶ್ವ ವಿದ್ಯಾಲಯದ ಸೌಲಭ್ಯಗಳನ್ನು ಪಡೆದಿರುವವರಿಗೆ ಮತ್ತೊಮ್ಮೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಇದನ್ನು ಅತಿ ಸೂಕ್ಷ್ಮವಾಗಿ ಪರಿಗಣಿಸಿ, ಪ್ರವೇಶ ನೀಡುವ ಸಂದರ್ಭದಲ್ಲಿ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.

ಆದುದರಿಂದ, ಎಲ್ಲ ಪ್ರಧಾನ ಕ್ಷೇಮಪಾಲಕರು ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ, ಮುಚ್ಚಳಿಕೆಯನ್ನು ಪಡೆದು ಹಾಸ್ಟೆಲ್ ಪ್ರವೇಶ ನೀಡಬೇಕು. ವಿಭಾಗಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ, ಮೊದಲ ಪಿಜಿ/ಎರಡನೆ ಪಿಜಿ ಎಂಬುದನ್ನು ಪರಿಶೀಲಿಸಿಕೊಂಡು ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶದ ಅರ್ಜಿಗಳನ್ನು ದೃಢೀಕರಿಸಬೇಕು ಎಂದು ಕುಲಸಚಿವರು ಸೂಚನೆ ನೀಡಿದ್ದಾರೆ.

ರಮೇಶ್ ಬಾಬು ಆಕ್ರೋಶ:ಉನ್ನತ ಶಿಕ್ಷಣ ಸಚಿವರ ಸೂಚನೆಗೆ ಅನುಗುಣವಾಗಿ ಈ ಸುತ್ತೋಲೆಯನ್ನು ಹೊರಡಿಸಲಾಗಿದ್ದು ಬಿಜೆಪಿಯು ದಲಿತರ ವಿರೋಧಿ ಮತ್ತು ದಲಿತರ ವ್ಯಾಸಂಗಕ್ಕೆ ಅಡ್ಡಿಪಡಿಸುವ ಮನಸ್ಥಿತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸುವುದರ ಮೂಲಕ ತನ್ನ ಹಿಡನ್ ಅಜೆಂಡಾ ಜಾರಿಗೊಳಿಸಿದೆ’ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ ಎಲ್ಲ ರೀತಿಯ ಬೆಂಬಲ ಮತ್ತು ಸಹಾಯದ ನಡುವೆಯೂ ಸ್ನಾತಕೋತ್ತರ ಹಾಗೂ ಉನ್ನತ ವ್ಯಾಸಂಗಕ್ಕೆ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಸರಕಾರದ ನೀತಿ ಮತ್ತು ನಿರೂಪಣೆಗಳು ಯಾವತ್ತೂ ದಲಿತ ವರ್ಗದ ಪರವಾಗಿ ಇರಬೇಕಾಗುತ್ತದೆ. ಬೆಂಗಳೂರು ವಿವಿ ಕುಲಸಚಿವರು ಹೊರಡಿಸಿರುವ ದಲಿತ ವಿರೋಧಿ ಸುತ್ತೋಲೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಮತ್ತು ಉನ್ನತ ಶಿಕ್ಷಣ ಸಚಿವರು ದಲಿತ ಧಮನಕಾರಿಯಾದ ನೀತಿಗಳನ್ನು ಕೈಬಿಡಬೇಕು. ವಿವಿಯಲ್ಲಿ ದಲಿತ ಧಮನಕಾರಿ ಸುತ್ತೋಲೆಯನ್ನು ಹೊರಡಿಸಿರುವ ಕುಲಸಚಿವರನ್ನು ಅಮಾನತುಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಪರವಾಗಿ ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Similar News