ಮೂಡಿಗೆರೆ: ತಳವಾರ ಗ್ರಾಮದಲ್ಲಿ ಮತ್ತೊಂದು ಕಾಡಾನೆ ಸೆರೆ

3 ಕಾಡಾನೆಗಳ ಸೆರೆಗೆ ಆದೇಶ ನೀಡಿದ್ದ ಸರಕಾರ

Update: 2022-12-03 16:38 GMT

ಚಿಕ್ಕಮಗಳೂರು, ಡಿ.3: ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಜನರ ಆತಂಕಕ್ಕೆ ಕಾರಣವಾಗಿರುವ ಕಡಾನೆಗಳ ಹಾವಳಿ ನಿಯಂತ್ರಣದ ಉದ್ದೇಶದಿಂದ ಸಾಕಾನೆಗಳ ಸಹಾಯದಿಂದ ಕಡಾನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ಸೋಮವಾರ ಒಂದು ಕಾಡಾನೆ ಸೆರೆ ಹಿಡಿದಿದ್ದ ಆರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಡಿಗೆರೆ ಭಾಗದಲ್ಲಿ ಉಪಟಳ ಮಾಡುತ್ತಿರುವ 3 ಕಾಡಾನೆಗಳ ಸೆರೆಗೆ ಇತ್ತೀಚೆಗೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. 

ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮೂಡಿಗೆರೆ ತಾಲೂಕಿನ ಕುಂದೂರು, ಹುಲ್ಲೇಮನೆ, ತಳವಾರ ಗ್ರಾಮಗಳ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಸೆರೆಗೆ 6 ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆ ವೇಳೆ ಕಳೆದ ಸೋಮವಾರ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಸೆರೆಯಾದ ಆನೆಯನ್ನು ಶಿವಮೊಗ್ಗದ ಸಕ್ರೇಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಕಾರ್ಯಾಚರಣೆಗೆ ಬಂದಿದ್ದ 6 ಆನೆಗಳ ಪೈಕಿ 1 ಆನೆ ಅನಾರೋಗ್ಯದ ಕಾರಣದಿಂದ ಹಿಂದಿರುಗಿದ್ದು, ಉಳಿದ 5 ಆನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ 5 ದಿನಗಳಿಂದ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದರು.

ಶನಿವಾರ ಮಧ್ಯಾಹ್ನದ ವೇಳೆ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಭಾರೀ ಗಾತ್ರದ ಕಾಡಾನೆ ಕಣ್ಣಿಗೆ ಬಿದ್ದಿದ್ದು, ಅರಿವಳಿಕೆ ತಜ್ಞರು ಕಾಡಾನೆಗೆ ಅರಿವಳಿಕೆ ನೀಡಿದ್ದಾರೆ. ಅರಿವಳಿಕೆಯಿಂದಾಗಿ ಪ್ರಜ್ಞೆ ತಪ್ಪಿದ್ದ ಕಾಡಾನೆಯನ್ನು ಸಿಬ್ಬಂದಿ ಸೆರೆ ಹಿಡಿದು ಸ್ಥಳಾಂತರ ಮಾಡಿದ್ದಾರೆಂದು ತಿಳಿದು ಬಂದಿದೆ.

Similar News