''ಟಿಪ್ಪು ಬಗ್ಗೆ ದ್ವೇಷ ಕಾರುವವರು ಬ್ರಿಟೀಷರು, ಟಿಪ್ಪು ಬಳಿಯಿದ್ದ ಬ್ರಾಹ್ಮಣ ವಿದ್ವಾಂಸರ ಬಗ್ಗೆ ಮಾತನಾಡುತ್ತಿಲ್ಲ''

ಅಂಕಣಕಾರ ಬಿ.ಚಂದ್ರೇಗೌಡ

Update: 2022-12-03 18:39 GMT

ಮಂಡ್ಯ, ಡಿ.3: ಮಾಧ್ಯಮಗಳಿಗೆ ಇಂದಿನ ಸಮಸ್ಯೆಗಳು ಮುಖ್ಯವಾಗಬೇಕೇ ಹೊರತು, ಇನ್ನೂರು ವರ್ಷಗಳ ಹಿಂದಿನ ಚರಿತ್ರೆಯ ಟಿಪ್ಪು ಸುಲ್ತಾನ್ ವಿಷಯವಲ್ಲ ಎಂದು ಬಯಲುಸೀಮೆ ಕಟ್ಟೆ ಪುರಾಣ ಖ್ಯಾತಿಯ ಅಂಕಣಕಾರ ಬಿ.ಚಂದ್ರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಚರಿತ್ರೆಯ ವಾಸ್ತವವನ್ನು ಮರೆಮಾಚುತ್ತಿರುವ ರಾಜಕಾರಣಿಗಳಂತೆಯೇ ಬಹುತೇಕ ಮಾಧ್ಯಮದವರೂ ಚರಿತ್ರೆಯ ಅರಿವಿಲ್ಲದೆ ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಟಿಪ್ಪು ಸಾಯುವವರೆಗೂ ಯುದ್ದದಲ್ಲೇ ನಿರತರಾಗಿದ್ದರು. ನಿಜವಾಗಿ ಆಡಳಿತ ನಡೆಸುತ್ತಿದ್ದವರು ಆಸ್ಥಾನದಲ್ಲಿದ್ದ ಐದು ಜನ ಬ್ರಾಹ್ಮಣ ವಿದ್ವಾಂಸರು. ಬ್ರಿಟೀಷರಿಗೆ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟವನು ಟಿಪ್ಪು. ವಾಸ್ತವ ಹೀಗಿರುವಾಗ ಟಿಪ್ಪು ಮಾಡಬಾರದು ಮಾಡಿದ ಎನ್ನುವ ಹಪಾಹಪಿತನ ಏಕೆ? ಮಾಡಬಾರದ್ದನ್ನು ಮಾಡಿದ ವಿಷಯದಲ್ಲಿ ಆಡಳಿತ ನಡೆಸುತ್ತಿದ್ದ ವಿದ್ವಾಂಸರ ಪಾತ್ರ  ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ನಿಜವಾಗಿ ನಮ್ಮ ಜನರ ಮೇಲೆ ದೌರ್ಜನ್ಯ ನಡೆಸಿದವರು ಬ್ರಿಟೀಷರು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ನೂರಾರು ಜನರನ್ನು ನಿರ್ದಯವಾಗಿ ಕೊಂದು ಹಾಕಿದರು. ಟಿಪ್ಪು ಬಗ್ಗೆ ದ್ವೇಷ ಕಾರರುವವರು ಬ್ರಿಟೀಷರ ಬಗ್ಗೆಯಾಗಲೀ, ಟಿಪ್ಪು ಬಳಿಯಿದ್ದ ಬ್ರಾಹ್ಮಣ ವಿದ್ವಾಂಸರ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಸಮಾಜದಲ್ಲಿ ಸುಳ್ಳುಗಳನ್ನು ಹರಡುತ್ತಿರುವವರ ಬಗ್ಗೆ ಮಾಧ್ಯಮಗಳು ಎಚ್ಚರಿಕೆವಹಿಸಬೇಕು. ಸುಳ್ಳು ಸುದ್ದಿಗಳಿಗೆ ಪ್ರತಿರೋಧ ಒಡ್ಡಬೇಕು. ಈ ಕುರಿತು ಸೆಮಿನಾರ್‍ಗಳನ್ನು ಮಾಡಬೇಕು. ನಮ್ಮ ಎದುರು ಇರುವ ಭಯಂಕರ ಸಮಸ್ಯೆಗಳ ಬಗ್ಗೆ ಒತ್ತುಕೊಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರಸ್ತುತ ಸಮಾಜ ಅಧೋಗತಿಗೆ ಹೋಗುತ್ತಿದೆ. ಹಿಂದಿ ಭಾಷೆ ಸವಾರಿ ಮಾಡುತ್ತಿದ್ದು, ಕನ್ನಡ ಭಾಷೆ, ಜಾನಪದ, ಜನರ ಸಂಸ್ಕøತಿ ಮಾಯವಾಗುತ್ತಿವೆ. ರಾಜಕಾರಣಿಗಳಂತೆ ಪತ್ರಕರ್ತರೂ ಬದಲಾಗಿದ್ದಾರೆ. ಮತದಾರರು ಗೊಬ್ಬರವಾಗಿಬಿಟ್ಟಿದ್ದಾರೆ. ಇದರ ಪರಿಣಾಮ ಸಮಾಜದ ಮೇಲೆ ಭಯಂಕರವಾಗಲಿದೆ ಎಂದು ಅವರು ಎಚ್ಚರಿಸಿದರು.

Similar News