ನಾವು ಪ್ರತಿಭಟನೆ ಮಾಡಿದ್ರೆ ಸಿ.ಟಿ.ರವಿ ಮನೆಯಿಂದ ಹೊರಬರಲು ಸಾಧ್ಯವಿಲ್ಲ: ಎಂ.ಬಿ.ಪಾಟೀಲ್

ಸಿದ್ದರಾಮಯ್ಯ ವಿರುದ್ಧ ಹೇಳಿಕೆ ವಿಚಾರ

Update: 2022-12-04 12:36 GMT

ಬೆಂಗಳೂರು, ಡಿ. 4: ‘ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಸರಿಯಲ್ಲ. ರವಿ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿದರೆ ಅವರು ಮನೆಯಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಏನೇ ಹೇಳಿಕೆ ನೀಡಿದರೂ ಸರಿ. ಆದರೆ, ವೈಯಕ್ತಿಕ ಟೀಕೆ ಶೋಭೆಯಲ್ಲ. ಸಿದ್ದರಾಮಯ್ಯನವರ ಹೆಸರು ಸಿದ್ದರಾಮೇಶ್ವರ ಎಂಬ ದೇವರ ಹೆಸರಿನಿಂದ ಆ ಹೆಸರು ಬಂದಿದೆ. ಮನಸೋ ಇಚ್ಛೆ ಮಾತನಾಡುವುದು ಸಲ್ಲ. ರವಿ ಇದನ್ನು ಇಲ್ಲಿಗೇ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ಮತ್ತಷ್ಟು ವಿಕೋಪಕ್ಕೆ ಹೋಗಬಹುದು’ ಎಂದು ತಿರುಗೇಟು ನೀಡಿದರು. 

‘ಭ್ರಷ್ಟಾಚಾರ ಎಂದರೆ ಕಾಂಗ್ರೆಸ್‍ನಲ್ಲಿ ಇರಲಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸುತ್ತದೆ. ಅವರು ವಿಪಕ್ಷ್ಷದಲ್ಲಿದ್ದ ವೇಳೆ ಆಗ ಏಕೆ ಸುಮ್ಮನೆ ಇದ್ದರು. ಎಂಟೂವರೆ ವರ್ಷ ಅವರಿಗೆ ಯಾವುದೇ ಭ್ರಷ್ಟಾಚಾರ ಇರಲಿಲ್ಲ. ರೌಡಿಗಳ ವಿಷಯ ಬಂದಾಗ ರೌಡಿಗಳನ್ನು ಸೇರಿಸಿಕೊಂಡಿದ್ದಾರೆ. ರೌಡಿಗಳಿಗೆ ಟಿಕೆಟ್ ಕೊಡುವ ಒಪ್ಪಂದ  ಆಗಿತ್ತು ಬಿಜೆಪಿಯಲ್ಲಿ ಎಂಬ ಮಾಹಿತಿ ಇದೆ’ ಎಂದು ಅವರು ದೂರಿದರು.

‘ಡಿ.ಕೆ.ಶಿವಕುಮಾರ್ ಮೇಲೆ ಆರೋಪಗಳಿದ್ದರೆ ತನಿಖೆ ಆಗುತ್ತದೆ. ನಲಪಾಡ್ ಮೇಲೆ ರೌಡಿಶೀಟ್ ಇದೆಯಾ? ಅವರ ಪ್ರಕರಣವೂ ತನಿಖೆ ಆಗುತ್ತದೆ. ಅಧ್ಯಕ್ಷರ ಬಗ್ಗೆ ಕೊತ್ವಾಲ್ ಶಿಷ್ಯ ಎನ್ನುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಬಿಜೆಪಿಯ ಹಲವು ಮುಖಂಡರು ರೌಡಿ ಸೈಲೆಂಟ್ ಸುನಿಲ್ ಕಾರ್ಯಕ್ರಮಕ್ಕೆ ಹೋಗಿದ್ದು ಸತ್ಯ ಎಂದು ಟೀಕಿಸಿದರು.

‘ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಸಭೆ ಕರೆಯಬೇಕಿತ್ತು, ಆದರೆ ಕರೆದಿಲ್ಲ. ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಅದನ್ನು ಮರೆಮಾಚಲು ಗಡಿ ವಿವಾದ ಕೆರಳಿಸುತ್ತಿದ್ದಾರೆ. ಜತ್, ಹಕ್ಕಲಕೋಟೆ, ಸೊಲ್ಲಾಪುರದಲ್ಲಿ ಕನ್ನಡಿಗರಿದ್ದಾರೆ. ಇವೆಲ್ಲವೂ ಕರ್ನಾಟಕಕ್ಕೆ ಸೇರಬೇಕಾಗುತ್ತದೆ’

-ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Full View

Similar News