ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಗೆ ಶಾಸಕ ರಾಜೇಗೌಡ ಸವಾಲು

ಅಕ್ರಮ ಆಸ್ತಿ ಖರೀದಿ ಆರೋಪ

Update: 2022-12-04 12:30 GMT

ಚಿಕ್ಕಮಗಳೂರು, ಡಿ.4: 'ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಡ್ಡಗಾಲು ಹಾಕುತ್ತಿದ್ದಾರೆ. ವಿನಾಕಾರಣ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ತನಗೆ ಬೇಸರವಾಗಿದ್ದು,  ಈ ಸಂಬಂಧ ತಾನು ಧರ್ಮಸ್ಥಳ ಸೇರಿದಂತೆ ಶಕ್ತಿ ಕೇಂದ್ರಗಳಲ್ಲಿನ ದೇವರ ಮೊರೆ ಹೋಗುತ್ತೇನೆ' ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ಅಕ್ರಮ ಜಮೀನು ಖರೀದಿ ವಿಚಾರವಾಗಿ ಜೀವರಾಜ್ ಆಪ್ತರು ಇತ್ತೀಚೆಗೆ ಶಾಸಕ ರಾಜೇಗೌಡ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿ ಅಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ರವಿವಾರ ಈ ಸಂಬಂಧ ವಿಡಿಯೋವೊಂದರ ಮೂಲಕ ಹೇಳಿಕೆ ನೀಡಿರುವ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಮಗೆ ಆರಂಭದಿಂದಲೂ ತೊಂದರೆ ನೀಡುತ್ತಿದ್ದು, ಇಂದಿಗೂ ಅದನ್ನು ಮುಂದುವರಿಸಿದ್ದಾರೆ. ಶಾಸಕನಾಗಿ ಜನಪರ ಕೆಲಸ ಮಾಡುವ ನನಗೆ ಸಿಕ್ಕಿದ್ದು, ಈ ಕೆಲಸ ಮಾಡಲು ಶಾಸಕ ಜೀವರಾಜ್ ಅಡ್ಡಗಾಲು ಹಾಕುತ್ತಿದ್ದಾರೆ. ಜೀವರಾಜ್ ಮಾಡಿರುವ ಅನ್ಯಾಯ, ಅಪಪ್ರಚಾರಗಳ ಬಗ್ಗೆ ದೇವರ ಮುಂದೆ ಆಣೆ ಮಾಡಿ ಹೇಳುತ್ತೇನೆ. ಜೀವರಾಜ್ ಹೇಳುವ ದೇವಸ್ಥಾನಕ್ಕೆ ನಾನು ಬರುತ್ತೇನೆ. ಅಲ್ಲಿ ಅವರೂ ಆಣೆ ಮಾಡಲಿ, ನಾನೂ ಆಣೆ ಮಾಡುತ್ತೇನೆ ಎಂದಿದ್ದಾರೆ.

ನಾನು ಸಿದ್ದಾರ್ಥ ಅವರ ಆಸ್ತಿ ಖರೀದಿ ಮಾಡಿರುವುದು ಬಹಳ ವರ್ಷಗಳ ಹಿಂದೆ. ಅಂದಿನ ಜಮೀನಿಗಿದ್ದ ಮಾರುಕಟ್ಟೆ ದರಕ್ಕೆ ಅದನ್ನು ಖರೀದಿ ಮಾಡಿದ್ದೇನೆ. ಅದರ ಅಂದಾಜು ಮೊತ್ತ 14-15 ಕೋಟಿ ಅಷ್ಟೇ, ಆದರೆ ಜೀವರಾಜ್ 274 ಕೋ. ರೂ. ಮೌಲ್ಯದ ಜಮೀನು ಖರೀದಿ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಜೀವರಾಜ್ ಅವರಿಗೆ 15 ಕೋ. ರೂ., 274 ಕೋ. ರೂ. ನಡುವಿನ ವೆತ್ಯಾಸ ಗೊತ್ತಿಲ್ಲವಾ? 80 ಕೋ. ರೂ. ವಂಚನೆ ಮಾಡಿದ್ದೇನೆ ಎನ್ನುತ್ತಿರುವ ಜೀವರಾಜ್‍ಗೆ ಬುದ್ಧಿ ಇಲ್ಲವಾ? ಅವಿದ್ಯಾವಂತರಾ?, ಜನರಲ್ಲಿ ಏಕೆ ಗೊಂದಲ ಮೂಡಿಸುತ್ತಿದ್ದೀರಿ? ಸರಕಾರಕ್ಕೆ ವಂಚನೆ ಮಾಡಿರುವುದು ನಿಜವಾದರೇ ತನಿಖೆ ಮಾಡಿಸಲಿ, ನಾನು ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. 

'ಈ ವಿಚಾರವನ್ನು ಸುಮ್ಮನೆ ಬಿಡಲ್ಲ.  ಚರ್ಚು, ಮಸೀದಿ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತೇನೆ, ಕೆಟ್ಟ ಮನಸ್ಥಿತಿಯವರಿಗೆ ಒಳ್ಳೆ ಬುದ್ಧಿ ಕೊಡು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ, ಶೃಂಗೇರಿ ಕ್ಷೇತ್ರದ ಜನರು ಜೀವರಾಜ್ ಅವರ ನಡವಳಿಕೆ ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಜೀವರಾಜ್ ಇಂತಹ ಹೇಳಿಕೆ ನೀಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ತಮ್ಮ ವಿರೋಧಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೂ ತನಗೆ ಐಟಿ, ಇಡಿ, ಲೋಕಾಯುಕ್ತದಂತಹ ಸಂಸ್ಥೆಗಳ ಬಗ್ಗೆ ಗೌರವ ಇದೆ. ಈ ಸಂಸ್ಥೆಗಳು ಬೆಜೆಪಿಯವರು ಎಂಬ ಕಾರಣಕ್ಕೆ ಸುಮ್ಮನಿರಲ್ಲ, ಬಿಜೆಪಿಯವರ ಮೇಲೂ ಈ ಸಂಸ್ಥೆಗಳಿಂದ ದಾಳಿಯಾಗಿದೆ. ರಾಜಕಾರಣಕ್ಕೂ ಬರುವುದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿತ್ತು, ರೈಸ್ ಮಿಲ್ ಮ್ಯಾನೇಜರ್ ಆಗಿದ್ದ ಯಡಿಯೂರಪ್ಪ ಅವರ ಆಸ್ತಿ ಈಗೆಷ್ಟಿದೆ ಎಂಬುದೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. 

Similar News