‘ಟಿಪ್ಪು ನಿಜ ಕನಸುಗಳು’ ಕೃತಿ ಮಾರಾಟಕ್ಕೆ ನಿರ್ಬಂಧ ಆದೇಶ ವಿಸ್ತರಿಸಿದ ಕೋರ್ಟ್

Update: 2022-12-04 13:17 GMT

ಬೆಂಗಳೂರು, ಡಿ. 4: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಕೃತಿಯನ್ನು ಮಾರಾಟ ಮಾಡದಂತೆ ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ, ಇತ್ತೀಚೆಗೆ ಮಾಡಿದ್ದ ಮಧ್ಯಂತರ ನಿರ್ಬಂಧ ಆದೇಶವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. 

ಈ ಕುರಿತು ಬೆಂಗಳೂರು ನಿವಾಸಿಯಾದ ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ.ಎಸ್. ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೆ.ಆರ್.ಮೆಂಡೋನ್ಸಾ ಅವರ ನೇತೃತ್ವದ ನ್ಯಾಯಪೀಠ, ಮಧ್ಯಂತರ ಆದೇಶವನ್ನು ಸೋಮವಾರದವರೆಗೆ ವಿಸ್ತರಿಸಿದೆ. 

ಕೃತಿಕಾರ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಕೃತಿ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಪೀಠವು ನಿರ್ಬಂಧ ವಿಧಿಸಿ ಆದೇಶಿಸಿತ್ತು. 

ಟಿಪ್ಪು ಸುಲ್ತಾನ್ ಕುರಿತಂತೆ ತಪ್ಪು ಮಾಹಿತಿಯನ್ನು ‘ಟಿಪ್ಪು ನಿಜ ಕನಸುಗಳು’ ಪುಸ್ತಕ ಒಳಗೊಂಡಿದೆ. ಈ ಪುಸ್ತಕವು ಕೋಮು ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಪ್ರತಿವಾದಿಗಳು ಕೋರ್ಟ್ ಮುಂದುಗಡೆ ಹಾಜರಾಗಲು ಬಾಕಿ ಇರುವಾಗ, ಹಾಗೊಂದು ಬಾರಿ ಪುಸ್ತಕ ಮಾರಾಟ ಮಾಡಲು ಮುಂದಾದರೆ ಅರ್ಜಿಯ ಉದ್ದೇಶಕ್ಕೆ ಹಿನ್ನೆಡೆಯಾಗಲಿದೆ. ಅಲ್ಲದೆ, ವಿವಾದ ಸೃಷ್ಟಿಸಿದ ಕೃತಿಗಳು ಬಹುಬೇಗ ಮಾರಾಟವಾಗುತ್ತವೆ. ಹೀಗಾಗಿ, ಈ ಸಂದರ್ಭದಲ್ಲಿ ಪ್ರಯೋಜನದ ಸಮತೋಲನವು ಫಿರ್ಯಾದಿಗಳ ಪರವಾಗಿದೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. 

ಈ ಪುಸ್ತಕದಲ್ಲಿ ಸಾಕಷ್ಟು ತಪ್ಪುಗಳಿದ್ದು, ಕೃತಿ ರಚನೆಕಾರರು ಯಾವ ಮೂಲಗಳಿಂದ ಮಾಹಿತಿ ಪಡೆದಿದ್ದಾರೆ ಎಂಬುದು ಪುಸ್ತಕದಲ್ಲಿ ತಿಳಿಸಿಲ್ಲ. ಮಾನಹಾನಿಕಾರಿಯಾದ ಪದಗಳನ್ನು ಪುಸ್ತಕ ಒಳಗೊಂಡಿದ್ದು, ಇದು ಮುಸ್ಲಿಮ್ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಕೃತಿ ರಚನೆಕಾರರು ಹಾಗೂ ಪುಸ್ತಕದ ಮುನ್ನುಡಿ ಬರೆದಿರುವ ಲೇಖಕರು, ಮುನ್ನುಡಿಯಲ್ಲಿ ನಾಟಕವು ನಿಜ ಸಂಗತಿಗಳ ಇತಿಹಾಸವನ್ನು ಆಧರಿಸಿದೆ. ಸಂಶೋಧನೆಯನ್ನು ಆಧರಿಸಿ ನಾಟಕ ರಚಿಸಲಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಆದುದರಿಂದ, ಕೃತಿ ಮಾರಾಟ ಮತ್ತು ಮೈಸೂರಿನಲ್ಲಿ ನಾಟಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನ್ಯಾಯಪೀಠವು ನಾಟಕ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿತ್ತು. 

Similar News