ತುಮಕೂರು | 18,533 ಮತದಾರರನ್ನು ಕೈ ಬಿಟ್ಟ ಆರೋಪ: ಕೇಂದ್ರ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು

Update: 2022-12-05 06:31 GMT

ತುಮಕೂರು, ಡಿ.5: ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18,533 ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಇನ್ನು ಕೈಬಿಟ್ಟ ಮತದಾರರಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಸಮಾಜ ಸೇವಕ ಎಂ.ಬಿ.ಪಂಚಾಕ್ಷರಯ್ಯ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 2022ರ ಜನವರಿಯಲ್ಲಿ ಜಿಲ್ಲಾ ಚುನಾವಣಾ ಶಾಖೆ ಯಿಂದ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಕರಡು ಮತದಾರರ ಪಟ್ಟಿಯಲ್ಲಿ 18533 ಮತದಾರರನ್ನು ಮತ ಪಟ್ಟಿಯಿಂದ ಕೈ ಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಮತದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. 2018ರಲ್ಲಿ ಬೋಗಸ್ ಮತದಾರರ ಹೆಚ್ಚಾಗಿರುವುದನ್ನು ಪತ್ತೆ ಹಚ್ಚಿ ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾ ಶಾಖೆ ಹಾಗು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ  ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಮತದಾರರನ್ನು ಕೈಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದರು.

ತುಮಕೂರು ನಗರದಲ್ಲಿ 2013 ರಿಂದ 2017ರ ವರೆಗೂ ಆರು ವರ್ಷದ ಅವಧಿಯಲ್ಲಿ 3,865ಕ್ಕೂ ಹೆಚ್ಚು ಪುನರಾವರ್ತಿತ ಮತದಾರರನ್ನು ಕೈಬಿಟ್ಟಿದ್ದು 2018 ರಿಂದ 2022ರ ವೇಳೆಗೆ 18 ಸಾವಿರದ 533 ಮತದಾರರನ್ನು ಕೈ ಬಿಟ್ಟಿದ್ದಾರೆ. 2023ರ ಜನವರಿ ವೇಳೆಗೆ 10 ರಿಂದ 15 ಸಾವಿರಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಭವ ಇದೆ ಎಂದು ಆರೋಪಿಸಿದ್ದಾರೆ.

2017-18 ರಲ್ಲಿ ಸೊಗಡು ಶಿವಣ್ಣರವರ ನೇತೃತ್ವದಲ್ಲಿ ತಾವು ಹಾಗೂ ತಮ್ಮ ಸ್ನೇಹಿತರು, ಬೋಗಸ್ ಮತದಾರರ ವಿರುದ್ಧ ಹೋರಾಟ ಮಾಡಿದ್ದು ಅಂದು 3,600 ಹೆಚ್ಚು ಪುನರಾವರ್ತಿತ ಮತದಾರರು ಇದ್ದರು ಎಂದಿರುವ ಅವರು, 2018ರಿಂದ 2022 ಸಾಲಿನ ಅವಧಿಯಲ್ಲಿ ಸುಮಾರು 18,533 ಮತದಾರರು ಪುನರಾವರ್ತನೆ ಆಗಲು ಹೇಗೆ ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಸ್ಪಷ್ಟನೆ ನೀಡಿಲ್ಲ. ಈಗಿನ ಕರಡು ಮತದಾರರ ಪಟ್ಟಿಯಲ್ಲಿ 2,40,918 ಮತದಾರರು ಇದ್ದಾರೆ ಎಂದು ಚುನಾವಣಾ ಶಾಖೆ ಪ್ರಕಟಿಸಿದ್ದು ಇನ್ನು ಮುಂಬರುವ 2023ರ ಜನವರಿ ವೇಳೆಗೆ ಮತ್ತೆ ಇದೇ ಪಟ್ಟಿ ಇರುತ್ತದೆ ಎಂದಿದ್ದಾರೆ.

ಈ ವಿಚಾರವಾಗಿ ಸಂಬಂಧಿಸಿದಂತೆ ಯಾವುದೇ ರಾಜಕೀು ಪಕ್ಷಗಳು ಗಮನ ಹರಿಸುತ್ತಿಲ್ಲ. ಈಗಿನ ಜನಸಂಖ್ಯೆಯ ಪ್ರಕಾರ ತುಮಕೂರು ನಗರದಲ್ಲಿ 3.5 ದಿಂದ 4 ಲಕ್ಷದ ವರೆಗೂ ಜನಸಂಖ್ಯೆ ಇದ್ದು ಇದಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಧ್ವನಿ ಎತ್ತಲು ಮುಂದಾಗುತ್ತಿಲ್ಲ.ಹಾಗಾಗಿ ಮುಂದಿನ ದಿನದಲ್ಲಿ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಕೈಬಿಡುವ ಸಾಧ್ಯತೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಪಂಚಾಕ್ಷರಯ್ಯ ತಿಳಿಸಿದ್ದಾರೆ.

2 011ರ ಜನಗಣತಿ ಪ್ರಕಾರ ತುಮಕೂರು ನಗರದಲ್ಲಿ 3,08,000 ಮತದಾರರಿದ್ದು ಅದೇ ಜನಗಣತಿಯ ಪ್ರಕಾರ 24,918 ಎಂದು ಕರಡು ಮತದಾರರ ಪಟ್ಟಿಯಲ್ಲಿ ತೋರಿಸಿದ್ದು, ಅದರಂತೆ ಶೇಕಡ 80ರಷ್ಟು ಇದೆ ಎಂದು ಹೇಳುತ್ತಿದ್ದು, 2023ರ ಕರುಡು ಪಟ್ಟಿಯನ್ನು ಸಹ ಇದೇ ಮತದಾರರ ಪ್ರಮಾಣ ಇರುತ್ತದೆ. ಈ ಮೂಲಕ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸಮತೋಲನ ಮಾಡಲು ಹೊರಟಿದ್ದಾರೆ ಎಂದು ಪಂಚಾಕ್ಷರಯ್ಯ ಆರೋಪಿಸಿದ್ದಾರೆ.

Similar News