ಮೆದುಳು ಜ್ವರ ನಿಯಂತ್ರಣಕ್ಕೆ ಇಂದಿನಿಂದ 48 ಲಕ್ಷ ಮಕ್ಕಳಿಗೆ ಲಸಿಕೆ: ಆರೋಗ್ಯ ಸಚಿವ ಡಾ.ಸುಧಾಕರ್

''ಮೊದಲ ವಾರದಲ್ಲಿ ಶಾಲೆಗಳಲ್ಲಿ ಲಸಿಕಾಕರಣ''

Update: 2022-12-05 06:17 GMT

ಬೆಂಗಳೂರು, ಡಿ. 5: ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ(ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಇಂದಿನಿಂದ (ಡಿ.5) ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ 1ರಿಂದ 15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ‘ಜೆಇ ಮೆದುಳು ಜ್ವರ ‘ಪ್ಲೇವಿವೈರಸ್' ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಹಂದಿಗಳು ಮತ್ತು ಕಾಡಿನ ಪಕ್ಷಿಗಳಲ್ಲಿರುವ ಈ ವೈರಾಣುವಿಗೆ ಮಾನವರು ಕಟ್ಟಕಡೆಯ ಹೋಸ್ಟ್ ಆಗಿರುತ್ತಾರೆ. ಡಿಸೆಂಬರ್ ಮೊದಲನೆ ವಾರದಲ್ಲಿ ಎಲ್ಲ್ಲ ಸರಕಾರಿ-ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರ ನೀಡಿದ್ದಾರೆ.

ನಂತರದ ಎರಡು ವಾರಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಉಚಿತವಾಗಿ ಜೆನವ್ಯಾಕ್ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದೆ ಎಂದು ಅವರು ತಿಳಿಸಿದರು.

‘ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್ ಸೆಫಲೈಟಿಸ್ (ಜೆಇ) ಪಿಡುಗು ಗುರುತಿಸಲಾಗಿದೆ. ಭಾರತವೂ ಸೇರಿದಂತೆ ಏμÁ್ಯದ 11 ಏಷ್ಯಾ ರಾಷ್ಟ್ರಗಳು ಈ ಪಟ್ಟಿಯಲ್ಲಿದೆ. ಪ್ರತಿವರ್ಷ ಸರಾಸರಿ 68ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ.20ರಿಂದ ಶೇ.30ರಷ್ಟಿದೆ. ಗುಣಮುಖರಾದ ಶೇ.30ರಿಂದ ಶೇ.50ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಜೆಇ ಮೆದುಳು ಜ್ವರದ ಮೊದಲ ಪ್ರಕರಣ 1955ರಲ್ಲಿ ತಮಿಳುನಾಡಿನ ವೆಲ್ಲೂರ್‍ನಲ್ಲಿ ವರದಿಯಾಗಿತ್ತು. ಕರ್ನಾಟಕದಲ್ಲಿ 1978ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳು 15ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. 2016ರಲ್ಲಿ 11 ಪ್ರಕರಣಗಳು, 2017ರಲ್ಲಿ 23 ಪ್ರಕರಣಗಳು, 2018ರಲ್ಲಿ 35 ಪ್ರಕರಣಗಳು, 2019ರಲ್ಲಿ 33 ಪ್ರಕರಣಗಳು, 2020ರಲ್ಲಿ 19 ಪ್ರಕರಣಗಳು, 2021ರಲ್ಲಿ 25 ಪ್ರಕರಣಗಳು, 2022ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ. ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ(ಎಸ್‍ಎಸ್‍ಎಲ್)ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ನಿಮ್ಹಾನ್ಸ್-ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ಇನ್ಸ್‍ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

10 ಜಿಲ್ಲೆಗಳಲ್ಲಿ ಲಸಿಕಾಕರಣ: ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೆ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೆ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಮೆದುಳು ಜ್ವರದ ವಿರುದ್ಧ ಯುದ್ಧ: ‘ನಾವೀಗ ಮೆದುಳು ಜ್ವರದ ವಿರುದ್ಧ ಯುದ್ಧ ಸಾರಬೇಕಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲ್ಲ ರೀತಿಯಲ್ಲಿ ಸನ್ನದ್ಧವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಹೆಚ್ಚುವರಿಯಾಗಿ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೆಇ ಹರಡದ ಅವಧಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಈ ಅಭಿಯಾನದಲ್ಲಿ 1ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು’

-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

Similar News