ಬಡ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟ ‘ಶ್ರೀನಿವಾಸ’ ಮನೆ ಉದ್ಘಾಟನೆ

Update: 2022-12-05 15:46 GMT

ಉಡುಪಿ, ಡಿ.5: ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಹಾಗೂ ಹಳೆ ವಿದ್ಯಾರ್ಥಿ ಪದವಿಯಲ್ಲಿ ಓದುತ್ತಿರುವ ರಕ್ಷಿತಾರ ಬಡ ಕುಟುಂಬಕ್ಕೆ ಶಾಲೆಯ ಹಳೆವಿದ್ಯಾರ್ಥಿಗಳು ದಾನಿಗಳ ನೆರವಿನಿಂದ ಕರಂಬಳ್ಳಿ ಯಲ್ಲಿ ನಿರ್ಮಿಸಿಕೊಟ್ಟ ‘ಶ್ರೀನಿವಾಸ’ ನಿವಾಸದ ಉದ್ಘಾಟನೆ ಇಂದು ಸಂಜೆ ನಡೆಯಿತು.

ಶಾಲೆಯ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಮೆಚ್ಚಿ ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಮೂಲಕ ದೇಣಿಗೆ ನೀಡಿದ ಬೆಂಗಳೂರಿನ ಉದ್ಯಮಿ  ಎಚ್. ಎಸ್. ಶೆಟ್ಟಿ ಅವರ ಗೌರವಾರ್ಥ ಈ ಮನೆಯನ್ನು ನಿರ್ಮಿಸಲಾಗಿದೆ. 

ಬೆಂಗಳೂರಿನ ಉದ್ಯಮಿ ಎಚ್.ಎಸ್.ಶೆಟ್ಟಿ ಮನೆಯನ್ನು ಉದ್ಘಾಟಿಸಿ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರೂ ಆದ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. 

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಹೆಗ್ಗುಂಜೆ ಸೊಸೈಟಿ ಯ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ರಾಘವೇಂದ್ರಕಿಣಿ, ವಿ.ಜಿ.ಶೆಟ್ಟಿ, ವಿಶ್ವನಾಥ ಶೆಣೈ, ಡಾ. ನಿತ್ಯಾನಂದ ಶೆಟ್ಟಿ, ಎಚ್.ರಾಜೀವ ಶೆಟ್ಟಿ, ಪಿ.ವೇಣುಗೋಪಾಲ ಆಚಾರ್ಯ, ಗಿರಿಧರ ಆಚಾರ್ಯ, ಜಯಂತಿ ಪೂಜಾರಿ, ಪಿ.ದಿನೇಶ್ ಪೂಜಾರಿ, ಡಾ.ಪ್ರತಿಮಾ ಜಯಪ್ರಕಾಶ್, ಸಂತೋಷ ಕರ್ನೇಲಿಯೋ, ವಸಂತ ಪೂಜಾರಿ,  ಎಚ್.ಎನ್. ಶೃಂಗೇಶ್ವರ, ಶಾಲಾ ಮುಖ್ಯ ಶಿಕ್ಷಕಿ ಅನಸೂಯ, ಶಾಲಾ ಅಧ್ಯಾಪಕ ವೃಂದ ಹಾಗೂ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು  ಪಾಲ್ಗೊಂಡರು.

ವಿದ್ಯಾರ್ಥಿಗಳ ರಕ್ಷಕರಾದ ರಮೇಶ್ ನಾಯ್ಕ್ ಮತ್ತು ಇಂದಿರಾ ನಾಯ್ಕ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

Similar News