ಜಗ ದಗಲ

Update: 2022-12-06 06:01 GMT

ಸತ್ಯದ ಮೇಲೆ ಬೆಳಕು

ಆತ ಇತಿಹಾಸ ಪ್ರಾಧ್ಯಾಪಕ. ಅವರ ಸಂಶೋಧನೆಯು ತನ್ನದೇ ಕುಟುಂಬವು ಜನಾಂಗೀಯ ಹಿಂಸಾಚಾರದ ಬಲಿಪಶುವಾಗಿತ್ತು ಎಂಬುದನ್ನು ಬಯಲು ಮಾಡಿತ್ತು. ಟೆಕ್ಸಾಸ್ ಗಡಿಯಲ್ಲಿನ ಶತಮಾನದಷ್ಟು ಹಳೆಯ ಹತ್ಯಾಕಾಂಡದ ಮೇಲೆ ಬೆಳಕು ಚೆಲ್ಲಿದ್ದ ಸಂಶೋಧನೆ ಅದು.

ದಕ್ಷಿಣ ಟೆಕ್ಸಾಸ್ ಕಾಲೇಜಿನಲ್ಲಿ ಇತಿಹಾಸ ಮತ್ತು ಮೆಕ್ಸಿಕನ್ ಅಮೆರಿಕನ್ ಅಧ್ಯಯನದ ಪ್ರಧ್ಯಾಪಕರಾಗಿರುವ ಟ್ರಿನಿಡಾಡ್ ಗೋನ್ಸಾಲಸ್ ಅವರೀಗ ಈ ಮಹತ್ವದ ಶೋಧನೆಗಾಗಿ 2022ನೇ ಸಾಲಿನ ‘ಜಾನ್ ಲೂಯಿಸ್ ಅವಾರ್ಡ್ ಫಾರ್ ಹಿಸ್ಟರಿ ಆ್ಯಂಡ್ ಸೋಷಿಯಲ್ ಜಸ್ಟಿಸ್’ ಪಡೆದಿದ್ದಾರೆ. ಖ್ಯಾತ ನಾಗರಿಕ ಹಕ್ಕುಗಳ ಹೋರಾಟಗಾರನಾಗಿದ್ದ ಜಾನ್ ಲೂಯಿಸ್ ಹೆಸರಿನಲ್ಲಿ 2021ರಲ್ಲಿ ಆರಂಭಿಸಲಾದ ಈ ಪ್ರಶಸ್ತಿಯನ್ನು ನಾಯಕತ್ವ ಹಾಗೂ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯಕ್ಕೆ ವೃತ್ತಿಪರ ಐತಿಹಾಸಿಕ ಕೊಡುಗೆಗಾಗಿ ನೀಡಲಾಗುತ್ತದೆ.

ಮೆಕ್ಸಿಕೊ-ಟೆಕ್ಸಾಸ್ ಗಡಿಯಲ್ಲಿ 1910ರಿಂದ 1920ರ ಅವಧಿಯಲ್ಲಿ ಮೆಕ್ಸಿಕನ್ನರು ಮತ್ತು ಮೆಕ್ಸಿಕನ್-ಅಮೆರಿಕನ್ನರ ಸರಕಾರಿ ಪ್ರಾಯೋಜಿತ ಹತ್ಯೆಗಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಕ್ಕಾಗಿ ಪ್ರಶಸ್ತಿ ಪಡೆದಿರುವ ರೆಫ್ಯೂಸಿಂಗ್ ಫರ್ಗೆಟ್ ಎಂಬ ಶೈಕ್ಷಣಿಕ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ ಗೋನ್ಸಾಲಸ್. ಸಮಾನ ಮನಸ್ಕ ಅಧ್ಯಾಪಕರುಗಳೊಂದಿಗೆ ಸೇರಿ ಅವರು ಸ್ಥಾಪಿಸಿದ ಸಂಸ್ಥೆ ಅದು. ನಿಜವಾದ ಇತಿಹಾಸವನ್ನು ವಿದ್ಯಾರ್ಥಿಗಳ ಪಠ್ಯವಾಗಿ ಅಳವಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದವರಾಗಿದ್ದಾರೆ ಗೋನ್ಸಾಲಸ್.

ಹೊಸ ಖನಿಜಗಳು

ಎರಡು ಹೊಸ ಖನಿಜಗಳನ್ನು ಕಂಡ ಕೆನಡಾ ಸಂಶೋಧಕರು ಅಚ್ಚರಿಗೊಂಡಿದ್ದಾರೆ. ಪೂರ್ವ ಆಫ್ರಿಕಾದಲ್ಲಿ ಬಿದ್ದ ಉಲ್ಕಾಶಿಲೆಯಲ್ಲಿ ಈ ಹೊಸ ಖನಿಜಗಳು ಪತ್ತೆಯಾಗಿವೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ. 15-ಟನ್ ತೂಕದ ಎಲ್ ಅಲಿ ಉಲ್ಕಾಶಿಲೆ 2020ರಲ್ಲಿ ಸೊಮಾಲಿಯಾದಲ್ಲಿ ಬಿದ್ದಿತ್ತು. ನೆಲದ ಮೇಲೆ 2 ಮೀಟರ್‌ಗಿಂತಲೂ ಹೆಚ್ಚು ಅಗಲಕ್ಕೆ ವ್ಯಾಪಿಸಿಕೊಂಡಿದ್ದ ಇದು ಒಂಭತ್ತನೇ ಅತಿದೊಡ್ಡ ಆಕಾಶ ಶಿಲೆಯೆಂದು ಗುರುತಿಸಲ್ಪಟ್ಟಿತ್ತು. ಅಲ್ಬರ್ಟಾ ವಿಶ್ವವಿದ್ಯಾನಿಲಯದ ಉಲ್ಕಾಶಿಲೆ ಸಂಗ್ರಹದಲ್ಲಿ ಈ ಶಿಲೆಯ ತುಣುಕನ್ನು ಪರೀಕ್ಷಿಸಿದ ಸಂಶೋಧಕರು ಹೊಸ ಖನಿಜಗಳನ್ನು ಕಂಡುಕೊಂಡರು.

ಹೊಸ ಖನಿಜಗಳನ್ನು ಆ ಉಲ್ಕಾಶಿಲೆಯ ಹೆಸರಿಗೆ ಹತ್ತಿರವಾಗಿ ಎಲಾಲೈಟ್ ಮತ್ತು ಎಲ್ಕಿಸ್ಟಾಂಟನೈಟ್ ಎಂದು ಹೆಸರಿಸಲಾಗಿದೆ, 1980ರ ದಶಕದಲ್ಲಿ ಪ್ರಯೋಗಾಲಯದಲ್ಲಿ ಇದೇ ರೀತಿಯ ಖನಿಜಗಳನ್ನು ಸಂಶ್ಲೇಷಿಸಲಾಗಿದೆಯಾದರೂ ಅವು ನೈಸರ್ಗಿಕವಾಗಿ ಕಾಣಿಸಿಕೊಂಡಿಲ್ಲ. ಪ್ರಕೃತಿಯ ಪ್ರಯೋಗಾಲಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಹೊಸ ಖನಿಜಗಳು ಸಹಾಯ ಮಾಡಲಿವೆ ಎಂಬುದು ಸಂಶೋಧಕರ ನಿರೀಕ್ಷೆ.

ವಲಸಿಗ ಸ್ನೇಹಿ ನಗರಗಳು

ಹೊಸ ಸಮೀಕ್ಷೆಯ ಪ್ರಕಾರ ಮೂರು ಪ್ರತ್ಯೇಕ ಖಂಡಗಳಲ್ಲಿನ ಮೂರು ವಿಭಿನ್ನ ನಗರಗಳು ವಲಸಿಗರಿಗೆ ವಾಸಿಸಲು ಮತ್ತು ಕೆಲಸ ಮಾಡಲು ಉತ್ತಮ ಸ್ಥಳಗಳಾಗಿವೆ. ಸ್ಪೇನ್‌ನ ವೆಲೆನ್ಸಿಯಾ ಅಂತರ್‌ರಾಷ್ಟ್ರಗಳ ವಲಸಿಗರ ನಗರ ಶ್ರೇಯಾಂಕ ಪಟ್ಟಿ 2022ರಲ್ಲಿ ಅಗ್ರಸ್ಥಾನದಲ್ಲಿದೆ. ಜೀವನದ ಗುಣಮಟ್ಟ, ಸಾರ್ವಜನಿಕ ಸಾರಿಗೆ ಮತ್ತು ಕ್ರೀಡಾ ಅವಕಾಶಗಳಿಗಾಗಿ ಈ ನಗರ ಗಮನ ಸೆಳೆದಿದೆ. ಎರಡನೇ ಸ್ಥಾನದಲ್ಲಿ ದುಬೈ ಇದ್ದು, ಹೊಸದಾಗಿ ಬರುವವರನ್ನು ಸ್ವಾಗತಿಸುವ ಬಗೆಯಿಂದ ಪ್ರಶಂಸೆಗೆ ಪಾತ್ರವಾಗಿದೆ. ಮೆಕ್ಸಿಕೊ ನಗರವು ಎಲ್ಲರಿಗೂ ಎಟುಕಬಲ್ಲಂಥದ್ದಾಗಿ ಮೂರನೇ ಸ್ಥಾನದಲ್ಲಿದೆ.

ಮಿಯಾಮಿಯು ಅತ್ಯುನ್ನತ ಶ್ರೇಣಿಯ ಉತ್ತರ ಅಮೆರಿಕದ ನಗರವಾಗಿದ್ದು, ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ನ್ಯೂಯಾರ್ಕ್ 16ನೇ ಸ್ಥಾನ ಮತ್ತು ಟೊರೊಂಟೊ 19ನೇ ಸ್ಥಾನದಲ್ಲಿದೆ. ಇಂಗ್ಲೆಂಡಿನಲ್ಲಿ ಲಂಡನ್ 40ನೇ ಸ್ಥಾನ ಪಡೆದಿದೆ. ಏಶ್ಯದ ಇತರೆಡೆಗಳಲ್ಲಿ, ಬ್ಯಾಂಕಾಕ್ ಕಡಿಮೆ ಜೀವನ ವೆಚ್ಚದ ಕಾರಣದಿಂದಾಗಿ 6ನೇ ಸ್ಥಾನದಲ್ಲಿದೆ. ಮೆಲ್ಬೋರ್ನ್ ವೃತ್ತಿಜೀವನದ ಸಮತೋಲನದ ಕಾರಣದಿಂದಾಗಿ 8ನೇ ಸ್ಥಾನದಲ್ಲಿದ್ದು, ಸಿಂಗಾಪುರವು ಟಾಪ್ 10 ನಗರಗಳಲ್ಲಿ 10ನೇ ಸ್ಥಾನ ಪಡೆದಿದೆ.