ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್: ಬಿಜೆಪಿ ವಾಗ್ದಾಳಿ

Update: 2022-12-06 11:04 GMT

ಬೆಂಗಳೂರು: 'ಬಾಬಾ ಸಾಹೇಬ್ ಅಂಬೇಡ್ಕರ್‌ (Bhimrao Ramji Ambedkar) ಅವರನ್ನು ಕಾಂಗ್ರೆಸ್ ನವರು ಚುನಾವಣೆಯಲ್ಲಿ ಸೋಲಿಸಿದರು' ಎಂದು ಬಿಜೆಪಿ (@BJP4Karnataka) ವಾಗ್ದಾಳಿ ನಡೆಸಿದೆ. 

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, 'ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಇತಿಹಾಸವೇ ಇದೆ' ಎಂದು ಕಿಡಿಕಾರಿದೆ.

''ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದರು. ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಘೋಷಿಸಿದರು. ತುರ್ತುಪರಿಸ್ಥಿತಿ ಹೇರಿ ಸಂವಿಧಾನ ಆಶಯಕ್ಕೆ ಕೊಳ್ಳಿ ಇಟ್ಟರು' ಎಂದು ಬಿಜೆಪಿ ಆರೋಪ ಮಾಡಿದೆ. 

''ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರ ವಿಧಿ ತೆಗೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರ ಆಶಯವನ್ನು ಗೌರವಿಸದೇ ಆರ್ಟಿಕಲ್ 370 ರ ವಿಧಿಯನ್ನು 70 ವರ್ಷ ಮುಂದುವರಿಸಿದರು. ಬಾಬಾ ಸಾಹೇಬರ ಆ ಆಶಯವನ್ನು ನನಸು ಮಾಡಿದ್ದು ಮೋದಿ ಸರ್ಕಾರ'' ಎಂದು ಹೇಳಿದೆ. 

''ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. "ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ" ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತ ಎಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು'' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

''ನೆಹರೂ ಸಮಾಧಿಗೆ 52 ಎಕರೆಗೂ ಹೆಚ್ಚು ಜಾಗ ಕೊಟ್ಟ ಕಾಂಗ್ರೆಸ್‌ಗೆ ಡಾ||ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ 6 ಅಡಿ ಜಾಗವನ್ನು ದೆಹಲಿಯಲ್ಲಿ ಬೇಕಂತಲೇ ಕೊಡಲಿಲ್ಲ. ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರರಿಗೆ ಕಾಂಗ್ರೆಸ್ ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲೂ ಬಿಡದೆ ಅವಮಾನಿಸಿದ್ದನ್ನು ಜನ ಮರೆತಿಲ್ಲ'' ಎಂದು ಹೇಳಿದೆ. 

Similar News