ಹಾವೇರಿ | ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ; 40 ದಿನ ರೆಸಾರ್ಟ್‍ನಲ್ಲಿದ್ದು ವಿಮಾನದಲ್ಲಿ ಬಂದ ಗ್ರಾ.ಪಂ ಸದಸ್ಯರು!

Update: 2022-12-06 11:57 GMT

ಹಾವೇರಿ, ಡಿ.6: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಸುದ್ದಿಯಾಗಿದ್ದ ರೆಸಾರ್ಟ್ ರಾಜಕೀಯ ಇದೀಗ ಗ್ರಾಮ ಪಂಚಾಯತ್ ಗೂ ಕಾಲಿಟ್ಟಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತ್ ಸದಸ್ಯರು 40 ದಿನಗಳ ಕಾಲ ಬೆಂಗಳೂರಿನ ರೆಸಾರ್ಟ್‍ನಲ್ಲಿ ಇದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಲತೇಶ್ ಅವರು ಒಪ್ಪಂದದಂತೆ ಅದ್ಯಕ್ಷ ಸ್ಥಾನ ಬಿಟ್ಟುಕೊಡದೇ ಸತಾಯಿಸಿದ್ದರಿಂದ ಇನ್ನೊಂದು ಬಣದ  ಸದಸ್ಯರು ಅಧ್ಯಕ್ಷ ಮಾಲತೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದ್ದಾರೆ.

ಗ್ರಾ.ಪಂನ ಒಟ್ಟು 13 ಜನ ಗ್ರಾ.ಪಂ ಸದಸ್ಯರಲ್ಲಿ 9 ಸದಸ್ಯರು ಸಂತೋಷ್ ಭಟ್ ಗುರೂಜಿ ಬಣದವರಾಗಿದ್ದರೆ, ಇನ್ನುಳಿದ ಅಧ್ಯಕ್ಷ ಮಾಲತೇಶ್ ಸಹಿತ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಆದರೆ ಇತ್ತೀಚೆಗೆ  ಅಧಿಕಾರ ಸ್ವೀಕರಿಸುವ ವೇಳೆಯಲ್ಲಿ ಮಾಲತೇಶ್ ಅಧ್ಯಕ್ಷರ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ತಿಳಿಸಿದ್ದರು. ನಂತರ ಆ ಸ್ಥಾನವನ್ನು ಬಿಟ್ಟುಕೊಡುವುದಾಗಿಯೂ ತಿಳಿಸಿದ್ದರು. ಆದರೆ ಮಾಲತೇಶ್ 15 ತಿಂಗಳ ನಂತರ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡದೇ ಸತಾಯಿಸುತ್ತಿದ್ದ. ಹೀಗಾಗಿ ಗ್ರಾ.ಪಂ ಅಧ್ಯಕ್ಷ ಮಾಲತೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು ನಿರ್ಧರಿಸಿದ್ದಾರೆನ್ನಲಾಗಿದೆ.

ಅದರಂತೆ ಮಾಲತೇಶ್ ಗ್ರಾ.ಪಂ ಸದಸ್ಯರಿಗೆ ಆಮಿಷ ಒಡ್ಡುವ ಆತಂಕದ ಹಿನ್ನೆಲೆಯಲ್ಲಿ ಸಂತೋಷ್ ಭಟ್ ಗುರೂಜಿ ಅವರು ಗ್ರಾ.ಪಂ ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್‍ಗೆ ಕಳಿಸಿಕೊಟ್ಟಿದ್ದರು. ಸುಮಾರು 40 ದಿನಗಳ ಕಾಲ ಅದೇ ರೆಸಾರ್ಟ್‍ನಲ್ಲೇ ಗ್ರಾಪಂ ಸದಸ್ಯರು ತಂಗಿದ್ದರನ್ನಲಾಗಿದ್ದು, ಇಂದು ಬೆಂಗಳೂರಿನಿಂದ ವಿಮಾನದಲ್ಲಿ ಬಂದು ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ಸದಸ್ಯರು ಭಾಗಿಯಾದ್ದಾರೆ ಎಂದು ಹೇಳಲಾಗಿದೆ. 

Similar News