ನಕಲಿ ಅಂಕಪಟ್ಟಿ ಜಾಲ: 25ಕ್ಕೂ ಅಧಿಕ ಪ್ರತಿಷ್ಠಿತ ವಿವಿಗಳ ಅಂಕಪಟ್ಟಿ ಜಪ್ತಿ

Update: 2022-12-06 13:10 GMT

ಬೆಂಗಳೂರು, ಡಿ. 6: ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ದೇಶದ 25ಕ್ಕೂಹೆಚ್ಚು ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಶಿಲ್ಪಾ, ಸುರೇಂದ್ರ ಕುಮಾರ್, ಶಾರದ ಹಾಗೂ ರಾಜಣ್ಣ ಎಂಬುವರನ್ನು ಬಂಧಿಸಲಾಗಿದೆ ಎಂದರು.

ನಗರದ ವೆಂಕಟೇಶ್ವರ ಇನ್ಸ್ಟಿಟ್ಯೂಟ್‍ಗೆ ಸೇರಿದ ಮಹಾಲಕ್ಷ್ಮಿ ಲೇಔಟ್, ಕೊಡಿಗೇಹಳ್ಳಿ ಹಾಗೂ ಮಾರತ್ ಹಳ್ಳಿಯ ಮೂರು ಇನ್ಸ್ಟಿಟ್ಯೂಟ್ ಕಚೇರಿಗಳ ಮೇಲೆ ಸಿಸಿಬಿಯ ಮೂರು ವಿಶೇಷ ತಂಡಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡದುಕೊಂಡು ಏಕಕಾಲದಲ್ಲಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಇವರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿವಿಧ ಪದವಿಗಳಿಗೆ ಸೇರಿದಂತೆ 1,500ಕ್ಕೂ ಹೆಚ್ಚು ನಕಲಿ ಮಾಕ್ರ್ಸ್ ಕಾರ್ಡ್, 80ಕ್ಕೂ ಹೆಚ್ಚು ಸೀಲ್‍ಗಳು, 9 ಮೊಬೈಲ್‍ಗಳು, ನಕಲಿಸುಮಾರು 1097 ದಾಖಲಾತಿ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುಲಿಗೆ: ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಸೇರಿ ದೇಶದ 25 ವಿಶ್ವವಿದ್ಯಾಲಯದಅಂಕ ಪಟ್ಟಿಗಳು ಪತ್ತೆಯಾಗಿದ್ದು, 50 ಸಾವಿರದಿಂದ ಒಂದು ಲಕ್ಷ ರೂ. ವರಿಗೆ ಹಣ ಪಡೆದುಅಂಕಪಟ್ಟಿ ನೀಡುತ್ತಿದ್ದು, ವೆಬ್ ಸೈಟ್ ಮೂಲಕ ದೂರ ಶಿಕ್ಷಣ ನೀಡುವ ನೆಪದಲ್ಲಿ ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ, ಡಿಸಿಪಿ ಯತೀಶ್ ಚಂದ್ರ, ಎಸಿಪಿ ರೀನಾ ಸುವರ್ಣ ಸೇರಿದಂತೆ ಪ್ರಮುಖರಿದ್ದರು.

Similar News