JDS ಪಂಚರತ್ನ ರಥಯಾತ್ರೆ; ಎಚ್‌.ಡಿ.ಕುಮಾರಸ್ವಾಮಿಗೆ ಹೆಲಿಕಾಪ್ಟರ್‌ ಮೂಲಕ ಹೂವಿನ ಸುರಿಮಳೆ

Update: 2022-12-06 15:31 GMT

ತುಮಕೂರು, ಡಿ.6: ಗುಬ್ಬಿ ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಸಾಗುವ ವೇಳೆ ಪಕ್ಷದ ಕಾರ್ಯಕರ್ತರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್‌ ಮೂಲಕ ಹೂ ಮಳೆ ಸುರಿಸಿದರು.

ರಥ ಯಾತ್ರೆ  ಬಿದ್ದಾಂಜನೇಯ ದೇವಾಲಯದಿಂದ ಪಟ್ಟಣದ ಬಸ್ ನಿಲ್ದಾಣವರೆಗೆ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಕೊಬ್ಬರಿ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ಸುರಿದ ಹೂವಿನ ಮಳೆ ನೆರೆದಿದ್ದ ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿತು.

''ಕೆಸರಿಗೆ ಕಲ್ಲು ಎಸೆಯುವ ಬದಲು ಕೆಸರನ್ನೇ ತೆಗೆಯುವ ಕೆಲಸ ಆಗಬೇಕು'' : ಗುಬ್ಬಿ ಪಟ್ಟಣದ ಬಸ್ ನಿಲ್ದಾಣ ಬಳಿ ಪಂಚರತ್ನ ರಥಯಾತ್ರೆ ಕುರಿತು ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನನಗೂ ಮಾತನಾಡಲು ಬರುತ್ತದೆ. ಆದರೆ ಕೆಸರಿಗೆ ಕಲ್ಲು ಎಸೆಯುವುದು ಸರಿಯಲ್ಲ. ಕೆಲ ದಲಿತ ಮುಖಂಡರನ್ನು ಎತ್ತಿ ಕಟ್ಟಿ ನನ್ನ ವಿರುದ್ದ ಹೇಳಿಕೆ ಕೊಡುವ ಚಿತಾವಣೆ ಯಾರದ್ದು ತಿಳಿದಿದೆ. ನಾನು ಎಲ್ಲಾ ಸಮುದಾಯದ ಪ್ರೀತಿ ಗಳಿಸಿದ್ದೇನೆ. ಇಂತಹ ಹೇಳಿಕೆಗೆ ಗಮನ ಕೊಡದೇ ದಲಿತ ಬಂಧುಗಳು ಜಾತ್ಯತೀತ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತಾಲೂಕು ಅಧ್ಯಕ್ಷ ಚಿಕ್ಕೀರಪ್ಪ, ಜಿಪಂ ಮಾಜಿ ಸದಸ್ಯೆ ಗಾಯತ್ರಿದೇವಿ ನಾಗರಾಜು, ಪಕ್ಷದ ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ಗಂಗಣ್ಣ, ಹೆಚ್.ಡಿ.ಯಲ್ಲಪ್ಪ, ಜಿ.ಡಿ.ಸುರೇಶ್ ಗೌಡ ಇತರರು ಇದ್ದರು.

Similar News