ಮತದಾರರ ಮಾಹಿತಿ ಕಳವು ಕೇಸ್ ನಲ್ಲಿ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅಮಾನತು; ರಾಜ್ಯ, ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

Update: 2022-12-07 17:00 GMT

ಬೆಂಗಳೂರು, ಡಿ.7: ಚಿಲುಮೆ ಸಂಸ್ಥೆಯಿಂದ ನಡೆದಿರುವ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಸಂಬಂಧ ತಮ್ಮನ್ನು ಸೇವೆಯಿಂದ ಅಮಾನತುಗೊಳಿಸಿದ ಸರಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರು ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕೆ.ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಕೇಸ್‍ಗೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ನಗರದ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕುರಿತು ಅರಿವು ಮೂಡಿಸುವುದು, ಮತದಾರರ ದತ್ತಾಂಶ ಪರಿಶೀಲಿಸುವುದು ಸೇರಿ ವಿವಿಧ ಚಟುವಟಿಕೆ ನಡೆಸಲು ಚಿಲುಮೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಗೆ ಅನುಮತಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತರು 2022ರ ಆ.20ರಂದು ಆದೇಶಿಸಿದ್ದರು. 

ಆದರೆ, ಅರಿವು ಮೂಡಿಸುವ ಸೋಗಿನಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವ ಮೂಲಕ ಅಕ್ರಮ ಎಸಗಿದ ಆರೋಪದ ಮೇಲೆ ಚಿಲುಮೆಗೆ ನೀಡಿದ ಅನುಮತಿಯನ್ನು 2022ರ ನ.2ರಂದು ರದ್ದುಪಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 

ಡಿಸಿ ಶ್ರೀನಿವಾಸ್ ಅಮಾನತು ತಡೆಗೆ ನಕಾರ: ಚಿಲುಮೆ ಸಂಸ್ಥೆಯಿಂದ ನಡೆದಿರುವ ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಅವರ ಅಮಾನತು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಇದನ್ನೂ ಓದಿ>>> ಆರ್ ಆರ್ ನಗರದಲ್ಲಿ ಒಕ್ಕಲಿಗ ಮತದಾರರ ಹೆಸರು ಡಿಲೀಟ್: ಸಂಸದ ಡಿ.ಕೆ.ಸುರೇಶ್ ಆರೋಪ

Similar News