ದಲಿತ ಸಮುದಾಯಗಳ ಐಕ್ಯತೆ ಪ್ರದರ್ಶಿಸಲು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ: ಡಾ.ಜಿ.ಪರಮೇಶ್ವರ್

''ಸಮುದಾಯದ ಮುಖ್ಯವಾಹಿನಿಗೆ ಮೀಸಲಾತಿ ಅನಿವಾರ್ಯ''

Update: 2022-12-07 12:40 GMT

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಜ.8ಕ್ಕೆ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಐಕ್ಯತಾ ಸಮಾವೇಶದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬುಧವಾರ, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ನಾಯಕರೆಲ್ಲಾ ಸೇರಿ ಸಭೆ ನಡೆಸಿದ್ದು, ನಮ್ಮ ಸಮಸ್ಯೆಯನ್ನು ಸರಕಾರ ಹಾಗೂ ಜನತೆಯ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ. ಹಲವರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಒಡೆಯಲು ಸತತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ದೇಶದಲ್ಲಿನ 1.5 ಕೋಟಿ, ರಾಜ್ಯದ ಶೇ.22ರಷ್ಟು ಸಮುದಾಯದ ಜನರ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪಾಲ್ಗೊಳ್ಳುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲವೇ ಪ್ರಿಯಂಕಾ ಗಾಂಧಿ ಈ ಮೂವರಲ್ಲಿ ಯಾರಾದರೊಬ್ಬರು ಪಾಲ್ಗೊಳ್ಳಬೇಕೆಂದು ಬಯಸಿದ್ದೇವೆ. ಆ ಸಂದರ್ಭದಲ್ಲಿ ಯಾರು ಪಾಲ್ಗೊಳ್ಳಲು ಸಾಧ್ಯವೋ ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.

ಸಮುದಾಯದ ಮುಖ್ಯವಾಹಿನಿಗೆ ಮೀಸಲಾತಿ ಅನಿವಾರ್ಯ: ದಲಿತ ಸಮುದಾಯದ ಜನರಿಗೆ ಸಾಕಷ್ಟು ಸಮಸ್ಯೆ ಇದೆ. ಇದನ್ನು ಸರಕಾರ ಮತ್ತು ಇತರೆ ಸಮುದಾಯದ ಜನರಿಗೆ ತಿಳಿಸುವ ಯತ್ನ ಮಾಡುತ್ತೇವೆ. ಮೀಸಲಾತಿ ಎನ್ನುವುದು ನಮ್ಮ ಹಕ್ಕು ಎಂದು ಜನರಿಗೆ ತಿಳಿಸುವ ಉದ್ದೇಶವಾಗಿದೆ. ಮೀಸಲಾತಿ ಬಗ್ಗೆ ಜನರ ಭಿನ್ನಾಭಿಪ್ರಾಯ ಕೇಳಿ ಬರುತ್ತಿದ್ದು, ತುಳಿತಕ್ಕೆ ಒಳಗಾದ ಜನರನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕೆಂಬ ಕಾನೂನು ರೂಪಿಸಿತ್ತು. ಮೀಸಲಿಟ್ಟ ಹಣ ಖಾಲಿ ಆಗದಿದ್ದರೆ ಅದನ್ನು ಮುಂದಿನ ಅವಧಿಗೆ ಮುಂದುವರಿಸಬೇಕು ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯಗಳ ಪಾಲಿಗೆ ಶೇ.24ರಷ್ಟು ಅನುದಾನವನ್ನು ಕಳೆದ ಮೈತ್ರಿ ಸರಕಾರವೂ ಸಹ ಮುಂದುವರಿಸಿತ್ತು. ಆದರೆ ಮೂರು ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರ, ಅನುದಾನವನ್ನು ಮೀಸಲಿಟ್ಟಿಲ್ಲ. ಸಮುದಾಯದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿಲ್ಲ. ಆದ್ದರಿಂದ ಮೀಸಲಾತಿ, ಅನುದಾನಗಳನ್ನು ಕಾನೂನಾತ್ಮಕವಾಗಿ ನೀಡಬೇಕೆಂದು ಸರಕಾರಕ್ಕೆ ಒತ್ತಡ ಹೇರಲಾಗುವುದು ಎಂದರು.

ದಲಿತ ಸಮುದಾಯವನ್ನು 20ನೇ ಷಡ್ಯೂಲ್‍ಗೆ ಸೇರಿಸಿ, ಕಾನೂನು ಹೊರಡಿಸಬೇಕು. ಇದಲ್ಲದೇ ಮನೆ ನಿರ್ಮಾಣ, ಮಕ್ಕಳಿಗೆ ವಿದ್ಯಾರ್ಥಿವೇತನ, ಕೆಐಎಡಿಬಿಗೆ ಸಾಲ ನೀಡುವುದು, ಗುತ್ತಿಗೆ ಕೆಲಸದಲ್ಲಿ ಮೀಸಲಾತಿ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಸಮಾವೇಶದ ಮೂಲಕ ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯದವರು ಒಂದಾಗಿ ನಿಂತು, ಒಗ್ಗಟ್ಟಿನಿಂದ ಸೇರಿ ಸಮಸ್ಯೆಗಳನ್ನು ಮನವರಿಕೆ ಮಾಡುವ ಕಾರ್ಯ ನಡೆಯುತ್ತದೆ. ಕಾಂಗ್ರೆಸ್ ಹಿಂದುಳಿದ ವರ್ಗಕ್ಕೆ ಉತ್ತಮ ಕೊಡುಗೆ ನೀಡಿದೆ. ನಾವು ಮಾತ್ರ ನಿಮ್ಮೊಂದಿಗೆ ಇದ್ದೇವೆ ಎನ್ನುವುದನ್ನು ವಿವರಿಸಬೇಕಿದೆ. ಬಿಜೆಪಿ ಹಾಗೂ ಜೆಡಿಎಸ್‍ನದ್ದು ನಿಜವಾದ ಕಾಳಜಿಯಲ್ಲ ಎನ್ನುವುದನ್ನೂ ತೋರಿಸಬೇಕಾಗಿದೆ ಎಂದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದಲ್ಲಿ ಸುಮಾರು 160 ಪ್ರತ್ಯೇಕ ಪಂಗಡವಿದ್ದೇವೆ. ನಮ್ಮನ್ನು ಸದಾ ಒಡೆದು ಆಳುವ ಕಾರ್ಯ ಆಗಿದೆ. ನಮಗಿರುವ ಮೀಸಲಾತಿಯನ್ನು ಸಮನಾಗಿ ಹಂಚಿಕೊಂಡು ಸಾಗಬೇಕಿದೆ. ಕಾಂಗ್ರೆಸ್ ಮೂಲಕ ಈ ಒಂದು ಕಾಳಜಿ ಈಡೇರಿಕೆ ಸಾಧ್ಯ ಎನ್ನುವುದನ್ನು ಜನರಿಗೆ ತಿಳಿಸುವುದಕ್ಕಾಗಿ, ಐಕ್ಯತಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮುದಾಯದ ಬಲವರ್ಧನೆ ಪ್ರಮುಖ ಧ್ಯೆಯವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಐದು ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಐತಿಹಾಸಿಕ ಸಮಾವೇಶವಾಗಲಿದ್ದು, ಬಹಳ ಸಮಯದಿಂದ ಇಂತದ್ದೊಂದು ಸಮಾವೇಶ ನಡೆಸುವ ಚರ್ಚೆ ನಡೆದಿತ್ತು. ಸಿದ್ದರಾಮಯ್ಯ ಸರಕಾರದ ಸಮಯದಲ್ಲಿ ಜಾರಿಗೆ ಬಂದ ಯೋಜನೆ ಮುಂದುವರಿಯಬೇಕು ಹಾಗೂ ನಮ್ಮ ಎಲ್ಲಾ ಸಮುದಾಯದವರೂ ಒಂದಾಗಿದ್ದೇವೆ ಎನ್ನುವುದನ್ನು ತೋರಿಸುವುದು ಸಮಾವೇಶದ ಉದ್ದೇಶ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪಿ.ಟಿ.ಪರಮೇಶ್ವರ್ ನಾಯ್ಕ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಇದ್ದರು.

Similar News