‘ಗಡಿ ವಿವಾದ’ ಸರಕಾರಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು: ಸತೀಶ್ ಜಾರಕಿಹೊಳಿ

Update: 2022-12-07 13:05 GMT

ಬೆಂಗಳೂರು, ಡಿ.7: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ‘ಇದು ಆಗಬಾರದಿತ್ತು. ಈ ಬಗ್ಗೆ ಎರಡು ರಾಜ್ಯಗಳ ಸರಕಾರಗಳು ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರತಿಭಟನೆಗಳಿಂದ ಜನಸಾಮಾನ್ಯರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಆದುದರಿಂದ, ಎರಡು ರಾಜ್ಯಗಳ ಸರಕಾರಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.

ಮಹಾರಾಷ್ಟ್ರ ಸರಕಾರದ ಸಚಿವರು ಬೆಳಗಾವಿಗೆ ಭೇಟಿ ನೀಡಲು ಹಠತೊಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ‘ಅವರು ನಮ್ಮ ಜಿಲ್ಲೆಗೆ ಬರಬಹುದು. ಆದರೆ ಇಲ್ಲಿಗೆ ಬಂದು ಸಭೆ ಮಾಡಿ ಜನರ ಭಾವನೆ ಕೆರಳಿಸುವಂತಿಲ್ಲ. ಅದು ತಪ್ಪಾಗುತ್ತದೆ. ಅವರು ಬಂದು ಸರಕಾರದ ಜತೆ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿ’ ಎಂದರು.

ಕಾಂಗ್ರೆಸ್ ಕಾಲದಲ್ಲಿ ಗಡಿ ವಿಚಾರವಾಗಿ ರಕ್ತಪಾತ ಆಗಿತ್ತು ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದಕ್ಕೆ ಉತ್ತರಿಸಿದ ಅವರು, ‘40 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಹಿಂದೆ ಮರಾಠಿ ಮಾತನಾಡಿದರೆ ಹಲ್ಲೆ ಮಾಡುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಈ ರೀತಿ ಪರಿಸ್ಥಿತಿ ಸುಧಾರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ. ಮರಾಠಿಗರು ಹಾಗೂ ಕನ್ನಡಿಗರ ಮನಸ್ಥಿತಿ ಸುಧಾರಿಸಿದ್ದು, ಕೇವಲ ರಾಜಕೀಯ ಮನಸ್ಥಿತಿ ಮಾತ್ರ ಸುಧಾರಿಸಬೇಕಿದೆ ಎಂದು ತಿಳಿಸಿದರು.

Full View

Similar News