ಗಡಿ ವಿವಾದ; ಸಿದ್ದರಾಮಯ್ಯ ಬಯಸಿದಂತೆ ಆಗುವುದಿಲ್ಲ, ಸರ್ವಪಕ್ಷ ಸಭೆ ಕರೆಯುವ ಸ್ಥಿತಿ ಬಂದಿಲ್ಲ ಎಂದ ಸಚಿವ ಕಾರಜೋಳ

Update: 2022-12-07 14:57 GMT

ಬೆಂಗಳೂರು, ಡಿ.7: ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸರ್ವಪಕ್ಷ ಸಭೆಯನ್ನು ಯಾವಾಗ ಕರೆಯಬೇಕು ಎನ್ನುವುದು ಆಡಳಿತ ಪಕ್ಷಕ್ಕೆ ಗೊತ್ತಿರುತ್ತದೆ. ಸದ್ಯಕ್ಕೆ ಸರ್ವಪಕ್ಷ ಸಭೆ ಕರೆಯುವಂತಹ ಸ್ಥಿತಿ ಬಂದಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಯಸಿದಂತೆ ನಾವು ರಾಜಕಾರಣ ಮಾಡಲು ಆಗುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಸಭೆ ಕರೆದು ಚರ್ಚೆ ಮಾಡಬೇಕು ಅನ್ನೋದು ಗೊತ್ತಿದೆ. ಅಂತಹ ಸಂದರ್ಭ ಬಂದರೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇವೆ ಎಂದರು.

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೆ ಅಂತಿಮ. ಅದನ್ನು ಬಿಟ್ಟು ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ. ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರು ಅನ್ನೋನ್ಯವಾಗಿ ಬಾಳುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ಪದೇ ಪದೇ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಸಚಿವರು ಬೆಳಗಾವಿ ಬಂದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ಈಗಾಗಲೆ ಅವರಿಗೆ ಸಂದೇಶ ರವಾನಿಸಿದ್ದೇವೆ. ನಮ್ಮ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಮಹಾರಾಷ್ಟ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಕರ್ನಾಟಕದ ಒಂದು ಇಂಚು ನೆಲವು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

Similar News