ದತ್ತಜಯಂತಿ ಹಿನ್ನೆಲೆ; ಮೂಡಿಗೆರೆ ಪಟ್ಟಣದಲ್ಲಿ ಬಲವಂತವಾಗಿ ಅಂಗಡಿ‌ಗಳನ್ನು ಬಂದ್ ಮಾಡಿಸಿದ ಪೊಲೀಸರು: ಆರೋಪ

Update: 2022-12-08 14:36 GMT

ಚಿಕ್ಕಮಗಳೂರು, ಡಿ.8: ದತ್ತಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶ ಇಲ್ಲದಿದ್ದರೂ ಮೂಡಿಗೆರೆ ಪಟ್ಟಣದಲ್ಲಿ ಪೊಲೀಸರು ಬಲವಂತವಾಗಿ ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆಂದು ಸಾರ್ವಜನಿಕರು‌ ಆರೋಪಿಸಿದ್ದಾರೆ.‌

ಮೂರು ದಿನಗಳ ದತ್ತಜಯಂತಿ ಅಂಗವಾಗಿ ಗಿರಿ ಸಂಪರ್ಕದ ರಸ್ತೆಗಳಲ್ಲಿ ಮಂಗಳವಾರ, ಬುಧವಾರ , ಗುರುವಾರ ಚಿಕ್ಕಮಗಳೂರು ನಗರ ಹಾಗೂ ನಗರ ಸಮೀಪದ  ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಜಿಲ್ಲಾಡಲಿತ ಅದೇಶ ಹೊರಡಿಸಿತ್ತು. ಅದರಂತೆ ಮೂಡಿಗೆರೆ ತಾಲೂಕಿನ ಕೊಟ್ಡಿಗೆಹಾರ ಗ್ರಾಮದಲ್ಲೂ ಬಂದ್ ಆದೇಶ ಇತ್ತು. ಆದರೆ ಮೂಡಿಗೆರೆ ಪಟ್ಟಣ ಸೇರಿದಂತೆ  ಬೇರೆಲ್ಲೂ ಬಂದ್ ಆದೆಶ ಇರದಿದ್ದರೂ ಮೂಡಿಗೆರೆ ಪಟ್ಡಣದಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆನ್ನಲಾಗಿದೆ.

ಗುರುವಾರ ದತ್ತಜಯಂತಿ ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ದತ್ತಮಾಲಾಧಾರಿಗಳು ವಾಹನಗಳಲ್ಲಿ ಬಾಬಾ ಬುಡಾನ್ ಗಿರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಪಟ್ಟಣದ ನಾಗರಿಕರು, ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿಲ್ಲ: ಪೊಲೀಸರ ಸಷ್ಟನೆ

''ದತ್ತಜಯಂತಿ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಂದ್ ಮಾಡಲು ಕೋರಿಕೊಂಡಿದ್ದೆವು. ಅಂಗಡಿ ಮುಂಗಟ್ಟುಗಳ ಮಾಲಕರು ಇದಕ್ಕೆ ಸಹಕಾರ ನೀಡಿದ್ದಾರೆ. ಕಳೆದ ಬಾರಿ ದತ್ತಜಯಂತಿ ಸಂದರ್ಭದಲ್ಲೂ ಬಂದ್ ಮಾಡಿ ಸಹಕಾರ ನೀಡಿದ್ದರು. ಈ ಬಾರಿಯೂ ಅಂಗಡಿ ಮುಂಗಟ್ಟುಗಳ ಬಂದ್‍ಗೆ ಕೋರಿಕೊಂಡಿದ್ದೇವೆಯೇ ಹೊರತು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿಲ್ಲ. ಪ್ರತೀ ವರ್ಷದಂತೆ ಈ ಬಾರಿಯೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶಾಂತಿ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಿದ್ದಾರೆ''

- ಆದರ್ಶ್, ಪಿಎಸ್ಸೈ, ಮೂಡಿಗೆರೆ ಪೊಲೀಸ್ ಠಾಣೆ

ಇದನ್ನೂ ಓದಿ: ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಕುತ್ತಿಗೆಗೆ ವಸ್ತ್ರ ಬಿಗಿದುಕೊಂಡು ಪ್ರತಿಭಟಿಸಿದ ಕಾಂಗ್ರೆಸ್ ಅಭ್ಯರ್ಥಿ

Similar News