​ಬಿಜೆಪಿ ನಾಯಕ ಎನ್.ಆರ್.ರಮೇಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2022-12-08 11:37 GMT

ಬೆಂಗಳೂರು, ಡಿ.8: ಕಾಂಗ್ರೆಸ್ ನಾಯಕರು, ಸರಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಆಧಾರ ರಹಿತ ದೂರುಗಳನ್ನು ಸಲ್ಲಿಕೆ ಮಾಡುವ ಬಿಜೆಪಿ ನಾಯಕ ಎನ್.ಆರ್.ರಮೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.

ಕೆಪಿಸಿಸಿಯ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಪ್ರಶಾಂತ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದು, ಲೋಕಾಯುಕ್ತ ಕಾಯ್ದೆ ಕಲಂ 20ರ ಅಡಿಯಲ್ಲಿ ಮೊಕ್ದಮೆ ದಾಖಲಿಸಿ ಎನ್.ಆರ್.ರಮೇಶ್ ಸಲ್ಲಿಸಿರುವ ದೂರುಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 

ಯಾವುದೇ ವ್ಯಕ್ತಿ ದುರುದ್ದೇಶವಿಲ್ಲದೇ ಲೋಕಾಯುಕ್ತ ಸಂಸ್ಥೆಗೆ ನ್ಯಾಯಕ್ಕಾಗಿ ದೂರುಗಳನ್ನು ದಾಖಲು ಮಾಡುತ್ತಾರೆ. ಆದರೆ, ಬಿಜೆಪಿ ನಾಯಕ ಎನ್.ಆರ್.ರಮೇಶ್ ದೂರು ನೀಡುವ ಮುನ್ನವೇ ಪ್ರಚಾರ ಪಡೆದು, ತನಿಖಾ ಸಂಸ್ಥೆಯ ಮೌಲ್ಯವೇ ಹಾಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಇದುವರೆಗೂ ಒಂದು ನೂರಕ್ಕೂ ಅಧಿಕ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ದೂರು ನೀಡಿದರೂ, ಯಾವುದು ಒಂದೂ ಸಹ ಸಾಬೀತು ಆಗಿಲ್ಲ ಎಂದು ಆರೋಪಿಸಿದರು.

ಲೋಕಾಯುಕ್ತ ತನಿಖಾ ಸಂಸ್ಥೆಯ ಮೇಲೆ ಜನರಿಗೆ ನಂಬಿಕೆ, ಗೌರವವಿದೆ.ಹಾಗಾಗಿ, ರಮೇಶ್ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿ ಪ್ರಕರಣ ದಾಖಲಾಗಬೇಕು.ಅದೇ ರೀತಿ, ಆಧಾರ ರಹಿತ ದೂರುಗಳ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Similar News