ದತ್ತಪೀಠಕ್ಕೆ ಪೂರ್ಣಾವಧಿಗೆ ಅರ್ಚಕರ ನೇಮಕಕ್ಕೆ ಸರಕಾರ ಬದ್ಧ: ಸಚಿವ ಭೈರತಿ ಬಸವರಾಜ್

Update: 2022-12-08 17:52 GMT

ಚಿಕ್ಕಮಗಳೂರು, ಡಿ.8: '21ವರ್ಷಗಳ ಬಳಿಕ ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ದತ್ತಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದು, ಇದು ದತ್ತಭಕ್ತರಲ್ಲಿ ಸಂತೋಷ ಮೂಡಿಸಿದೆ. ದತ್ತಪೀಠಕ್ಕೆ ಸರಕಾರ ತಾತ್ಕಾಲಿಕವಾಗಿ ಅರ್ಚಕರನ್ನು ನೇಮಿಸಿದ್ದು, ಪೂರ್ಣಾವಧಿಗೆ ಅರ್ಚಕರ ನೇಮಕ ಸಂಬಂಧ ಸರಕಾರ ಹಂತಹಂತವಾಗಿ ಇರುವ ಅಡೆತಡೆಗಳನ್ನು ನಿವಾರಿಸಿ ಕ್ರಮವಹಿಸಲಿದೆ' ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. 

ಗುರುವಾರ ತಾಲೂಕಿನ ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್ ದರ್ಗಾದ ಆವರಣದಲ್ಲಿ ದತ್ತ ಜಯಂತಿ ಅಂಗವಾಗಿ ದತ್ತಪಾದುಕೆ ದರ್ಶನ ಪಡೆದು ನಂತರ ನಡೆದ ದತ್ತಹೋಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದತ್ತಪೀಠದಲ್ಲಿರುವ ಗುಹೆಯಿಂದ ದೂರದಲ್ಲಿರುವ ತಾತ್ಕಾಲಿಕ ಶೆಡ್‍ನಲ್ಲಿ ಹೋಮ ಹವನ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತಿತ್ತು. ಈ ವರ್ಷ ಗುಹೆ ಸಮೀಪದಲ್ಲಿ ಹೋಮ ಹವನ ನಡೆಸಲು ರಾಜ್ಯ ಸರಕಾರ ಅವಕಾಶ ನೀಡಿದೆ. ಇದು ಭಕ್ತರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರು.

ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜಾ ವಿಧಿವಿಧಾನಗಳು ನೆರವೇರಿಸಬೇಕೆಂಬ ಸಂಕಲ್ಪ ತೋಟ್ಟಿದ್ದು, ದಶಕಗಳ ಹೋರಾಟ ಮತ್ತು ದತ್ತಾತ್ರೇಯ ಸ್ವಾಮಿಯ ಆಶೀರ್ವಾದದಿಂದ ಈ ವರ್ಷ ನೆರವೇರಿದೆ ಎಂದ ಅವರು, ದತ್ತಪೀಠದಲ್ಲಿ ಪೂರ್ಣಾವಧಿ ಅರ್ಚಕರ ನೇಮಕ ಸಂಬಂಧ ಇರುವ ಅಡೆತಡೆಗಳನ್ನು ಹಂತ ಹಂತವಾಗಿ ನಿವಾರಿಸಿ ಪೂರ್ಣಾವಧಿಗೆ ಅರ್ಚಕರನ್ನು ನೇಮಿಸಲಾಗುವುದು. ಈ ಮೂಲಕ ಪ್ರತಿನಿತ್ಯ ಪೀಠದಲ್ಲಿ ತ್ರಿಕಾಲ ಪೂಜೆ ಸೇರಿದಂತೆ ಪೂಜಾ ವಿಧಿವಿಧಾನಗಳು ನೆರವೇರುವಂತೆ ಮಾಡಲು ಸರಕಾರ ಕ್ರಮಕೈಗೊಳ್ಳಲಿದೆ ಎಂದರು.

ಈ ವರ್ಷ ತಾತ್ಕಾಲಿಕ ಅರ್ಚಕರಿಂದ ದತ್ತಪಾದುಕೆಗಳಿಗೆ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆದಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರಿಯಲಿದ್ದು, ಪೂರ್ಣಾಕಾಲಿಕ ಅರ್ಚಕರ ನೇಮಕಕ್ಕೆ ಸರಕಾರ ಬದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Similar News