ಅಂಬೇಡ್ಕರ್ ವಿರುದ್ಧ ಧಿಕ್ಕಾರ ಘೋಷಣೆ ಆರೋಪ; ಕೋಲಾರ ನಗರಸಭೆ ಸದಸ್ಯನ ವಿರುದ್ಧ ಪ್ರತಿಭಟನೆ

Update: 2022-12-08 18:12 GMT

ಕೋಲಾರ, ಡಿ.8: ಅಂಬೇಡ್ಕರ್‌ರ 66ನೇ ಪರಿನಿಬ್ಬಾಣ ದಿನಾಚರಣೆಯ ಸಂದರ್ಭದಲ್ಲಿ, ಅಂಬೇಡ್ಕರ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಘಟನೆಯನ್ನು ಖಂಡಿಸಿ ನಗರ ಸಭೆ ಎದುರು ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಡಿ.6ರಂದು ಪೌರಾಯುಕ್ತರು ನಗರಸಭೆ ಒಳಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವಾಗಲೇ, ಸ್ಥಳಕ್ಕೆ ಆಗಮಿಸಿರುವ ಕೋಲಾರ ನಗರಸಭೆಯ ಸದಸ್ಯ ಅಂಬರೀಷ್ ಪೌರಾಯುಕ್ತರಿಗೆ ಧಿಕ್ಕಾರ ಕೂಗುವ ಆವೇಶದಲ್ಲೇ ಅಂಬೇಡ್ಕರ್ ಅವರಿಗೂ ಧಿಕ್ಕಾರ ಕೂಗಿದ್ದರು ಎನ್ನಲಾಗಿದ್ದು, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಕೂಡಲೇ ಅಂಬರೀಶ್ ಬಂಧನಕ್ಕೆ ಆಗ್ರಹಿಸಿ ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.

ಧರಣಿಯಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂವಳ್ಳಿ ಪ್ರಕಾಶ್, ದಲಿತ ಮುಖಂಡ ಹಾರೋಹಳ್ಳಿ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ದಲಿತ ನಾರಾಯಣಸ್ವಾಮಿ, ಚೇತನ್ ಬಾಬು, ಹಳ್ಳಿಮನೆ ಸೋಮಣ್ಣ, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ರೈತ ಸಂಘದ ರಾಮು ಕಲ್ವಮಂಜಲಿ, ಜಿ.ನಾರಾಯಣಸ್ವಾಮಿ, ಅಯ್ಯಾ ಅನಿಲ್, ದೊಡ್ಡಮಲೆ ರವಿ, ಸಂತೋಷ್ ಕುಮಾರ್, ಮಾರ್ಜೇನಹಳ್ಳಿ ಮುನಿಸ್ವಾಮಿ, ಇನ್ನಿತರರು ಉಪಸ್ಥಿತರಿದ್ದರು.

► ಕ್ಷಮೆ ಕೋರಿದ ನಗರಸಭೆ ಸದಸ್ಯ ಅಂಬರೀಶ್: 

ನಗರಸಭೆ ಕಚೇರಿಯಲ್ಲಿ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರ  ಪರಿನಿಬ್ಬಾಣ ದಿನ ಆಚರಣೆಗೆ ನಗರಸಭೆ ಸದಸ್ಯರನ್ನು ಆಹ್ವಾನ ಮಾಡಿಲ್ಲ ಎಂದು ಪೌರಯುಕ್ತರ ವಿರುದ್ಧ ಆಕ್ರೋಶದಿಂದ ದಿಕ್ಕಾರ ಕೂಗುವ ಭರದಲ್ಲಿ ಬಾಯಿ ತಪ್ಪಿ ಅಂಬೇಡ್ಕರ್ ವಿರುದ್ಧ ತಪ್ಪಾಗಿ ದಿಕ್ಕಾರ ಕೂಗಿದ್ದೆ..! ತಪ್ಪಾಗಿ ಆಗಿರುವ ವಿಚಾರಕ್ಕೆ ನಾನು ಕ್ಷಮೆ ಯಾಚನೆ  ಮಾಡುತ್ತೇನೆ..! ನಾನು ಅಂಬೇಡ್ಕರ್ ಅನುಯಾಯಿ, ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ನಂಬಿದವನು..! ಈ ಅಚಾತುರ್ಯಕ್ಕೆ ನಾನು ಕಾರಣವಾಗಿದ್ದಕ್ಕೆ ಖುದ್ಧು ನನಗೇ ನೋವಾಗಿದೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ಅವರ ವಿಚಾರಧಾರೆ ಮೈದುಂಬಿಕೊಂಡು ಬೆಳದವನು ನಾನು, ನಿನ್ನಿಂದ ಈ ತಪ್ಪು ನಡೆದಿರೋದು ನನಗೇ ತಲೆ ತಗ್ಗಿಸುವಂತಾಗಿದೆ. ಇದರಿಂದ ಯಾರಿಗೇ ನೋವಾಗಿದ್ದರೂ ಎಲ್ಲರಲ್ಲೂ ನಾನು ಕ್ಷಮೆ ಕೋರುತ್ತೇನೆ. 

ಅಂಬರೀಶ್, ನಗರಸಭೆ ಸದಸ್ಯ.

Similar News