ನಾಗಮಂಗಲ: 450 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣ, 9 ಸಾವು

Update: 2022-12-08 18:55 GMT

ನಾಗಮಂಗಲ, ಡಿ.8: ರಾಜ್ಯದಲ್ಲಿ ರೈತರನ್ನು ಕಂಗೆಡಿಸಿರುವ ಚರ್ಮಗಂಟು ಎಂಬ ಸಾಂಕ್ರಾಮಿಕ ರೋಗ ನಾಗಮಂಗಲದಲ್ಲೂ ಉಲ್ಬಣಗೊಂಡಿದ್ದು, 450 ರಾಸುಗಳಲ್ಲಿ ಕಂಡುಬಂದಿದೆ. ಈಗಾಗಲೇ 9 ರಾಸುಗಳು ಸಾವನ್ನಪ್ಪಿವೆ ಎಂದು ಪಶು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲೂಕಿನ ಬೆಳ್ಳೂರು ಹೋಬಳಿ ಹೊರತು ಪಡಿಸಿ ಇತರ ಭಾಗಗಳ ಜಾನುವಾರುಗಳಲ್ಲಿ ರೋಗ ಕಂಡುಬಂದಿದೆ. ದೇವಲಾಪುರ ಹೋಬಳಿಯಲ್ಲಿ 4,ಬೋಗಾದಿ 3, ಕಸಬಾ 2 ಹಸು ಸಾವನ್ನಪ್ಪಿವೆ, ಇದುವರೆಗೂ 128 ಹಳ್ಳಿಗಳಲ್ಲಿನ 450 ರಾಸುಗಳಲ್ಲಿ ರೋಗ ಉಲ್ಬಣಗೊಂಡಿವೆೆ.

ಲಸಿಕೆ, ಪರಿಹಾರ ಕಾರ್ಯ ಚುರುಕು ತಾಲೂಕಿಗೆ ಒಟ್ಟು 25,000 ವ್ಯಾಕ್ಸಿನ್ ತರಿಸಲಾಗಿದ್ದು, ಇದುವರೆಗೂ 17,750 ಚುಚ್ಚುಮದ್ದುಗಳನ್ನು ರಾಸುಗಳಿಗೆ ನೀಡಲಾಗಿದೆ, 750 ಲಸಿಕೆ ಬಾಕಿ ಇದೆ ಎಂದು ಮಾಹಿತಿ ಸಿಕ್ಕಿದೆ.

 ಇನ್ನು ರೋಗದಿಂದ ಸಾವನ್ನಪ್ಪಿರುವ ರಾಸುಗಳ ರೈತರಿಗೆ ಪರಿಹಾರ ಕಾರ್ಯ ಕೂಡ ಚುರುಕಾಗಿದೆ ಕರುವಿಗೆ 5 ಸಾವಿರ, ಹಸು, 20 ಸಾವಿರ, ಎತ್ತು ಸಾವಿಗೆ 30 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ರೈತರು ಪಶು ಇಲಾಖೆಗೆ ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

15 ದಿನಗಳಲ್ಲಿ ಹತೋಟಿಗೆ

ಒಂದು ತಿಂಗಳಿಂದ ರೋಗವು ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಸರಕಾರ ರಾಸುಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ತಾಲೂಕಿನಲ್ಲಿ ರೋಗವು ಕಡೆಯ ಹಂತದಲ್ಲಿ ಇದ್ದು, 15 ದಿನಗಳಲ್ಲಿ ಹತೋಟಿಗೆ ಬರಲಿದೆ. ರೈತರು ಪಶು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

- ಡಾ.ಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ

  

Similar News