‘ನರ-ಮಾನಸಿಕ’ ರೋಗಿಗಳ ಸಂಖ್ಯೆ ಹೆಚ್ಚಳ ಕಳವಳಕಾರಿ: ಸಚಿವ ಡಾ.ಕೆ.ಸುಧಾಕರ್

Update: 2022-12-09 14:15 GMT

ಬೆಂಗಳೂರು, ಡಿ. 9: ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿರುತ್ತಾನೆ. ಇತ್ತೀಚಿನ ಹತ್ತು ವರ್ಷಗಳಲ್ಲಿ ನರ ಹಾಗೂ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದರ ಜೊತೆಗೆ ಹೇಗೆ ಬದುಕುತ್ತೇವೆ ಅನ್ನುವುದು ಮುಖ್ಯ. ಮಾನಸಿಕ ಆರೋಗ್ಯದಲ್ಲಿನ ಏರುಪೇರು ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆ ಸೃಷ್ಟಿಸುವ ಜೊತೆಗೆ ಸಮಾಜಕ್ಕೂ ಆತಂಕ ತರುತ್ತಿದೆ ಎಂದರು.

ಬೆಂಗಳೂರಿನಲ್ಲಿ ನಿಮ್ಹಾನ್ಸ್ ನಂತಹಾ ಸಂಸ್ಥೆ ಇರುವುದು ನಮ್ಮ ರಾಜ್ಯದ ಸೌಭಾಗ್ಯ. ಸಾಂಕ್ರಾಮಿಕವಲ್ಲದ ರೋಗಗಳಿಂದಲೂ ಬ್ರೈನ್‍ಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದೆ. ಹತ್ತು ವರ್ಷಗಳಿಂದ ಮಾನಸಿಕ, ನರರೋಗಗಳು, ಸ್ಟ್ರೋಕ್, ತಲೆನೋವಿನಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿ-ಅಂಶಗಳ ಪ್ರಕಾರ ಮಾನಸಿಕ ಆರೋಗ್ಯದಿಂದಲೇ ಸುಮಾರು ಶೇ.7-8ರಷ್ಟು ಜನರು ಸಾವಿಗೀಡಾಗುತ್ತಿದ್ದು, ಇದು ಸಾವಿಗೆ ಕಾರಣವಾಗಿರುವ ಅಂಶಗಳ ಪೈಕಿ 2ನೆ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಭಾರತ ಸರಕಾರ ಟಿ-ಮನಸ್ ಮೂಲಕ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಭಿಯಾನವನ್ನು ಮಾಡುತ್ತಿದೆ. ರಾಜ್ಯ ಸರಕಾರ ಹಬ್ ಮತ್ತು ಸ್ಪೋಕ್ ಮಾಡೆಲ್ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಹಾನ್ಸ್ ನೆರವಿನೊಂದಿಗೆ ಪೈಲಟ್ ಪ್ರಾಜೆಕ್ಟ್ ಮಾಡುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಕಡೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಪಿಎಚ್‍ಸಿ ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ 3 ತಿಂಗಳ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಎನ್‍ಎಂ, ಸಿಎಚ್‍ಒಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ಸಂಬಂಧ ತರಬೇತಿ ನೀಡಿ ಮಾನಸಿಕ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಅನ್ನುವ ಬಗ್ಗೆ ತಿಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.

Similar News