ವರುಣಾ ಕ್ಷೇತ್ರದಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿದ ಸಿದ್ಧರಾಮಯ್ಯ

ವರುಣಾದಲ್ಲಿ ಸಿದ್ಧರಾಮಯ್ಯ ಅವರಿಗೆ ಅಭೂತ ಪೂರ್ವ ಸ್ವಾಗತ

Update: 2022-12-09 16:24 GMT

ಮೈಸೂರು,ಡಿ.9: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಗೊಂದಲದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಳೆದ ಎರಡು ದಿನಗಳಿಂದ ವರುಣಾ ಕ್ಷೇತ್ರದಲ್ಲಿ ಸಂಚಾರ ಮಾಡುವ ಮೂಲಕ ಕ್ಷೇತ್ರದಲ್ಲಿನ ತಮ್ಮ ಬಗೆಗಿರುವ ಜನರ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಬಾದಾಮಿ, ಕೋಲಾರ, ವರುಣ ಸೇರಿದಂತೆ ಎಲ್ಲಿಂದ ಸ್ಪರ್ಧೆಮಾಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಳ್ಳದ ಸಿದ್ಧರಾಮಯ್ಯ ವರುಣಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಿ  ಹಲವು ಸಮುದಾಯದ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ.

ಗುರುವಾರ ವರುಣಾ ಕ್ಷೇತ್ರದ ಹದಿನಾರು ಮೋಳೆ ಗ್ರಾಮದಲ್ಲಿ ಉಪ್ಪಾರ ಸಮುದಾಯದವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಜೊತೆಗೆ ಉಪ್ಪಾರ ಸಮುದಾಯದವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಚಾಮರಾಜನಗರ ಕ್ಷೇತ್ರದಿಂದ ಉಪ್ಪಾರ ಸಮುದಾಯದ ಪುಟ್ಟರಂಗ ಶೆಟ್ಟಿ ಅವರಿಗೆ  ಕಾಂಗ್ರೆಸ್ ಟಿಕೆಟ್ ನೀಡಿ ಎರಡು ಬಾರಿ ಶಾಸಕರಾಗುವಂತೆ ಮಾಡಿರುವುದಾಗಿ ಮೆಲುಕು ಹಾಕಿದರು.

ಇನ್ನೂ ಸುತ್ತೂರು ಗ್ರಾಮಕ್ಕೆ ತೆರಳಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ. ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿಗಳ ಬಗ್ಗೆ ಮಾತನಾಡಿದರು. ಸಿದ್ಧರಾಮಯ್ಯ ವರುಣಾ ಕ್ಷೇತ್ರಕ್ಕೆ ಬಂದಾಗ ಅವರ ಅಭಿಮಾನಿಗಳು ಬೆಂಬಲಿಗರು ಮತ್ತು ಕಾರ್ಯಕರ್ತರುಗಳು ಅವರಿಗೆ ಅದ್ದೂರಿ ಸ್ವಾಗ ನೀಡಿ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಘೋಷಣೆಗಳನ್ನು ಕೂಗಿದರು. ಜೊತೆಗೆ ಈ ಬಾರಿ ವರುಣಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯವನ್ನು ಮಾಡಿದರು.

ಎರಡನೇ ದಿನವಾದ ಶುಕ್ರವಾರ ವರುಣಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಗೊದ್ದನಪುರ ಹುಂಡಿ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆಯನ್ನು ಉದ್ಘಾಟಿಸಿದರು. ಇದೇ ವೇಳೆ ಗ್ರಾಮಸ್ಥರು ಸಿದ್ಧರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ನೀಡಿ ಬೃಹತ್ ಗಾತ್ರದ ಸೇಬಿನ ಹಾರವನ್ನು ಜೆಸಿಬಿ ಮೂಲಕ ಹಾಕಿದರು.

ಬಳಿಕ ಅವರ ಸ್ವಗ್ರಾಮ ಸಿದ್ಧರಾಮನಹುಂಡಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹಾಲು ಶಿಥಿಲೀಕರಣ ಕೇಂದ್ರವನ್ನು ಉದ್ಘಾಟಿಸಿ ಜನರ ಸಹಕಾರದ ಬಗ್ಗೆ ತಿಳಿದುಕೊಂಡರು.

ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನಾನು ಎಂದಿಗೂ ವರುಣಾ ಕ್ಷೇತ್ರವನ್ನು ಮರೆಯಲಾರೆ ಮತ್ತು ಈ ಕ್ಷೇತ್ರದ ಜನರ ಋಣವನ್ನು ತೀರಿಸಲಾರೆ. ನಾನು ಈ ಕ್ಷೇತ್ರದಿಂದ ಆಯ್ಕೆಯಾಗಿ ಒಂದು ಬಾರಿ ವಿರೋಧ ಪಕ್ಷದ ನಾಯಕ ಮತ್ತು ಮತ್ತೊಂದು ಬಾರಿ ರಾಜ್ಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಮುಂದೆಯೂ ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಹೇಳುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ಕುರಿತು ಪರೋಕ್ಷವಾಗಿ ಮಾತನಾಡಿದರು.

ಒಟ್ಟಾರೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವರುಣಾ ಕ್ಷೇತ್ರದ ಜನರ ನಾಡಿಮಿಡಿತ ಮತ್ತು ಅವರು ತಮ್ಮ ಬಗೆಗೆ ಯಾವ ರೀತಿಯ ವಿಶ್ವಾಸ ಇಟ್ಟಿದ್ದಾರೆ ಎಂಬುದರ ಕುರಿತು ತಿಳಿಯಲು ವರುಣಾ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಸಂಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವರುಣಾದಿಂದಲೇ ಚುನಾವಣೆಗೆ ಸ್ಪರ್ಧಿಸುವುದಾದರೆ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆ ಕೂಡ ಕೇಳಿ ಬರುತ್ತಿದ್ದು, ಸಿದ್ಧರಾಮಯ್ಯ ಅವರು ವರುಣಾ ದಿಂದಲೇ ಸ್ಪರ್ಧೆ ಮಾಡುತ್ತಾರೋ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೊ ಕಾದು ನೋಡಬೇಕಿದೆ.

Similar News