ಪ್ರಧಾನಿಗೆ ಟ್ವೀಟ್ ನಿಂದ ನೋವಾಗಿದೆಯೇ ಹೊರತು 135 ಮಂದಿ ಮೃತಪಟ್ಟಿದ್ದಕ್ಕಲ್ಲ: ಸಾಕೇತ್ ಗೋಖಲೆ

Update: 2022-12-10 10:38 GMT

ಹೊಸದಿಲ್ಲಿ: “ಪ್ರಧಾನಿಗೆ ಟ್ವೀಟ್ ನಿಂದ ನೋವಾಗಿದೆಯೇ ಹೊರತು 135 ಮಂದಿಯ ಮೃತಪಟ್ಟಿದ್ದಕ್ಕಲ್ಲ” ಎಂದು ಸುಳ್ಳು ಮಾಹಿತಿಯ ಟ್ವೀಟ್ ಮಾಡಿದ್ದಾರೆಂಬ ಆರೋಪದಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಬಾರಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ  ಲೇವಡಿ ಮಾಡಿದ್ದಾರೆ. ಇದಲ್ಲದೆ ನನ್ನ ಬಂಧನವು ಭಾರತೀಯ ಜನತಾ ಪಕ್ಷದ ನಿರ್ದೇಶನದ ಮೇರೆಗೆ ನಡೆದಿದೆ ಎಂದೂ ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಮೋದಿ ಟ್ವೀಟ್ ಒಂದರಿಂದ ನೋವಿಗೊಳಗಾಗಿದ್ದಾರೆಯೇ ಹೊರತು 135 ಮುಗ್ಧ ಜನರ ಸಾವಿನಿಂದಲ್ಲ” ಎಂದು ಲೇವಡಿ ಮಾಡಿದ್ದಾರೆ.

 “ನನ್ನನ್ನು ಬಿಜೆಪಿ ಆದೇಶದ ಮೇರೆಗೆ ಬಂಧಿಸಲಾಯಿತು. ನಂತರ ಜಾಮೀನು ದೊರೆಯಿತು. ಮತ್ತೆ ನನ್ನನ್ನು ಬಂಧಿಸಲಾಯಿತು. ಮತ್ತೆ ನನಗೆ ಜಾಮೀನು ದೊರೆಯಿತು. ಇವೆಲ್ಲವೂ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಜರುಗಿತು. ನನ್ನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಮಾನ್ಯ ನ್ಯಾಯಾಂಗಕ್ಕೆ ಕೃತಜ್ಞನಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.

ಮೊದಲ ಪ್ರಕರಣದಲ್ಲಿ ಗೋಖಲೆಗೆ ಜಾಮೀನು ದೊರೆತ ನಂತರ ಅವರನ್ನು ಮತ್ತೆ ಬಂಧಿಸಲಾಗಿತ್ತು. ಅವರ ವಿರುದ್ಧ ಎರಡನೆ ದೂರು ದಾಖಲಿಸಿದ ಚುನಾವಣಾ ಆಯೋಗವನ್ನು “ಬಿಜೆಪಿ ಮೈತ್ರಿಪಕ್ಷ” ಎಂದು ಅವರು ಕಿಡಿ ಕಾರಿದ್ದಾರೆ.

ಗುರುವಾರ ಮೆಟ್ರೊಪಾಲಿಟನ್ ನ್ಯಾಯಾಲಯ ಜಾಮೀನು ನೀಡಿದ ಕೆಲವೇ ಗಂಟೆಗಳಲ್ಲಿ ಮೊರ್ಬಿ ನಗರದಲ್ಲಿ ಸಂಭವಿಸಿದ ಸೇತುವೆ ದುರಂತದ ಬಗ್ಗೆ ಗೋಖಲೆ ಮಾಡಿದ್ದ ಟ್ವೀಟ್ ವಿರುದ್ಧ ನೀಡಲಾಗಿದ್ದ ದೂರನ್ನು ಆಧರಿಸಿ ಗುಜರಾತ್ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದರು.

ಇದಕ್ಕಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, “ಇಂತಹ ಕ್ರಮಗಳಿಂದ ನನ್ನನ್ನು ಬಗ್ಗಿಸಬಹುದು ಎಂದು ಬಿಜೆಪಿ ತಿಳಿದುಕೊಂಡಿರುವುದು ಹಾಸ್ಯಾಸ್ಪದವಾಗಿದೆ. ಬದಲಿಗೆ ನಾನು ಅವರ ಎದುರು ಮತ್ತಷ್ಟು ಬಲಿಷ್ಠವಾಗಿ ಪ್ರತ್ಯಕ್ಷನಾಗುತ್ತೇನೆ” ಎಂದು ಹೇಳಿದ್ದಾರೆ.

ಅಹಮದಾಬಾದ್ ನಲ್ಲಿ ನನ್ನ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿ ಐದು ದಿನ ಕಳೆದರೂ ಪೊಲೀಸರು ನನಗೆ ಯಾವುದೇ ನೋಟೀಸ್ ನೀಡಿರಲಿಲ್ಲ. ಕೇಂದ್ರ ಗುಪ್ತಚರ ದಳದವರು ನನ್ನನ್ನು ಹುಡುಕುತ್ತಿದ್ದು, ಜೈಪುರ ವಿಮಾನ ನಿಲ್ದಾಣದ ಬಳಿ ನನ್ನನ್ನು ತಡೆ ಹಿಡಿಯುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ ಎಂದು ಪೊಲೀಸರು ನನಗೆ ತಿಳಿಸಿದರು ಎಂದು ಗೋಖಲೆ ಹೇಳಿದ್ದಾರೆ.

ದೆಹಲಿಯಲ್ಲಿ ಮತ್ತೊಂದು ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಅಹಮದಾಬಾದ್ ಪೊಲೀಸರಿಗೆ ಕೂಡಲೇ ಜೈಪುರಕ್ಕೆ ತೆರಳಿ ನನ್ನನ್ನು ಬಂಧಿಸುವಂತೆ ಸೂಚಿಸಲಾಯಿತು ಎಂದೂ ಹೇಳಿದ್ದಾರೆ.

ಬೇರೊಬ್ಬರು ಮಾಡಿದ ಟ್ವೀಟ್ ಅನ್ನು ಹಂಚಿಕೊಂಡಿದ್ದಕ್ಕೆ ನನ್ನ ವಿರುದ್ಧ ತಿರುಳಿಲ್ಲದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತನಗೆ ತೊಂದರೆಗೆ ಸಿಲುಕಿಸಿದ ಟ್ವೀಟ್ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

Similar News