ದತ್ತಜಯಂತಿ ಮುಗಿದಿದ್ದರೂ ಬಾಬಾಬುಡಾನ್‍ಗಿರಿಯಲ್ಲೇ ವಾಸ್ತವ್ಯ ಹೂಡಿರುವ ಅರ್ಚಕರು; ಆರೋಪ

Update: 2022-12-10 17:24 GMT

ಚಿಕ್ಕಮಗಳೂರು, ಡಿ.10: ದತ್ತ ಜಯಂತಿ ಆಚರಣೆಗೆ ವ್ಯವಸ್ಥಾಪನಾ ಸಮಿತಿ ಮನವಿ ಮೇರೆಗೆ ರಾಜ್ಯ ಸರಕಾರ ಮೂರು ದಿನಗಳಿಗೆ ಸೀಮಿತವಾಗಿ ತಾತ್ಕಾಲಿಕ ಅರ್ಚಕರನ್ನು ನೇಮಕ ಮಾಡಿದೆ. ಆದರೆ ದತ್ತ ಜಯಂತಿ ಕಾರ್ಯಕ್ರಮ ಮುಕ್ತಾಯಗೊಂಡಿದ್ದರೂ ಅರ್ಚಕರನ್ನು ಅಲ್ಲಿಯೇ ಇರಿಸಿಕೊಳ್ಳಲಾಗಿದೆ. ಇದು ನ್ಯಾಯಾಲಯ ಆದೇಶದ ಉಲ್ಲಂಘನೆಯಾಗಿದೆ ಎಂದು ಹಝ್ರತ್ ದಾದಾ ಹಯಾತ್ ಮೀರ್ ಖಲಂದರ್ ಕಮಿಟಿ ಅಧ್ಯಕ್ಷ ಸಿರಾಜ್ ಹುಸೇನ್ ಆರೋಪಿಸಿದ್ದಾರೆ.

ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರ ದತ್ತ ಜಯಂತಿ ಆಚರಣೆ ಸಂದರ್ಭ ಪೂಜಾವಿಧಾನಗಳನ್ನು ಕೈಗೊಳ್ಳಲು ಮೂರು ದಿನಗಳವರೆಗೆ ಮಾತ್ರ ತಾತ್ಕಾಲಿಕ ಅರ್ಚಕರನ್ನು ನೇಮಕ ಮಾಡಿದೆ. ಆದರೆ, ದತ್ತಜಯಂತಿ ಮುಗಿದಿದ್ದರೂ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಅರ್ಚಕರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. 

ದತ್ತ ಜಯಂತಿ ಕಾರ್ಯಕ್ರಮ ಮುಕ್ತಾಯಗೊಂಡು ನಾಲ್ಕು ದಿನಗಳ ಕಳೆದಿದ್ದರೂ ಅಲ್ಲಿ ಹಿಂದಿನ ಪದ್ಧತಿಗೆ ಅವಕಾಶವನ್ನು ನೀಡದೇ ಅರ್ಚಕರಿಂದ ಪೂಜೆ ನಡೆಸಲು ಹುನ್ನಾರ ಮಾಡಲಾಗಿದೆ. ಇದು ನ್ಯಾಯಾಲಯ ಹಾಗೂ ಸರಕಾರದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಚಿಕ್ಕಮಗಳೂರಿನ ಎಲ್ಲಾ ಸಂಘಟನೆಗಳು ಮನವಿ ಸಲ್ಲಿಸಿವೆ ಎಂದು ತಿಳಿಸಿರುವ ಅವರು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದತ್ತಜಯಂತಿ ಅಂಗವಾಗಿ ಕಳೆದ ಬುಧವಾರ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನಿಂಧಿಸಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಾಗಿದೆ ಎಂದು ಹೇಳಿದ್ದಾರೆ.

Similar News