ಶ್ರೀರಂಗಪಟ್ಟಣದ ಸಿಪಿಐ ಸೇರಿ 7 ಮಂದಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲು

ಸಂಘಪರಿವಾರದ ಕಾರ್ಯಕರ್ತನಿಗೆ ಪೊಲೀಸರಿಂದ ಕಿರುಕುಳ ಆರೋಪ

Update: 2022-12-11 07:47 GMT

ಮಂಡ್ಯ, ಡಿ.11: ಸಂಘಪರಿವಾರದ ಕಾರ್ಯಕರ್ತನಿಗೆ ಕಿರುಕುಳ ನೀಡಿದ ಆರೋಪದಡಿ  ಶ್ರೀರಂಗಪಟ್ಟಣದ ಸಿಪಿಐ ಬಿ.ಎಸ್. ಪ್ರಕಾಶ್ ಸೇರಿದಂತೆ ಏಳು ಮಂದಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಎದುರು ನಡೆಸುತ್ತಿದ್ದ ಧರಣಿಯನ್ನು ಹಿಂಪಡೆದಿದ್ದಾರೆ.

ಶ್ರೀರಂಗಪಟ್ಟಣದಲ್ಲಿ  ಡಿ.4ರಂದು ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಬಾಳೆ ದಿಂಡು ಎಸೆದ ಎಂದು ಸಂಘಪರಿವಾರದ ಕಾರ್ಯಕರ್ತನೋರ್ವನಿಗೆ ಪೊಲೀಸರು ಕಿರುಕುಳ ನೀಡಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ನಂತರ, ಜಾಮಿಯಾ ಮಸೀದಿ ಮುಂದೆ ರವಿವಾರ ತಡರಾತ್ರಿವರೆಗೂ ಧರಣಿ ಕುಳಿತ್ತಿದ್ದರು.

'ಸಂಕೀರ್ತನಾ ಯಾತ್ರೆ ವೇಳೆ ಬಾಳೆ ದಿಂಡು ಎಸೆದ ಎಂಬ ಕಾರಣಕ್ಕೆ ಪಾಂಡವಪುರ ತಾಲೂಕು ಹಿರೀಮರಳಿ ಗ್ರಾಮದ ಸುಶಾಂತ್ ಎಂಬಾತನನ್ನು ತಡರಾತ್ರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸುಶಾಂತ್ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಸಂಘಪರಿವಾರದ ಕಾರ್ಯಕರ್ತರು ಪಟ್ಟುಹಿಡಿದಿದ್ದರು. ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಎನ್.ಯತೀಶ್ ಪ್ರಕರಣದ ಕುರಿತು ಸಮಗ್ರ ಮಾಹಿತಿ ಅರಿತು ಕ್ರಮ ವಹಿಸುವುದಾಗಿ ಹೇಳಿದರೂ ಧರಣಿ ಹಿಂಪಡೆಯಲಿಲ್ಲ. ಕೊನೆಗೆ ಸಿಪಿಐ ಮತ್ತು ಏಳು ಮಂದಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಧರಣಿ ಹಿಂಪಡೆದರು. 

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಘಟಕದ ಸಹ ಸಂಚಾಲಕ ಎಸ್‌.ಕೆ.ಚಂದನ್‌, ತಾ.ಪಂ.ಮಾಜಿ ಅಧ್ಯಕ್ಷ ಟಿ. ಶ್ರೀಧರ್, ಸಹ ಸಂಚಾಲಕ ರತ್ನಾಕರ್, ನಗರ ಸಂಚಾಲಕ ಶ್ಯಾಮಸುಂದರ್‌, ಸಹ ಸಂಚಾಲಕ ಚಿನ್ನೇನಹಳ್ಳಿ ಹರ್ಷ, ನ್ಯಾಯ ಜಾಗರಣಾ ಜಿಲ್ಲಾ ಪ್ರಮುಖ್‌ ಟಿ. ಬಾಲರಾಜು, ಮದನ್, ಶಿವು, ರವಿ, ಸುಧಾಕರ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಮಾರ್ಕಂಡೇಯ, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಪೀಹಳ್ಳಿ ಎಸ್.ರಮೇಶ್, ಟಿ. ಶ್ರೀಧರ್, ಅಶೋಕ್ ಜಯರಾಂ, ಎಚ್‌.ಎನ್‌. ಮಂಜುನಾಥ್ ಧರಣಿಯಲ್ಲಿ ಭಾಗವಹಿಸಿದ್ದರು.

Similar News