ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಚಳಿ, ಮಳೆ ಹೆಚ್ಚಳ

Update: 2022-12-11 14:01 GMT

ಬೆಂಗಳೂರು, ಡಿ.11: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಾಂಡೌಸ್ ಚಂಡ ಮಾರುತದಿಂದಾಗಿ ಉದ್ಯಾನನಗರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿಯ ಜತೆಗೆ ಮಳೆ ಸುರಿಯುತ್ತಿದೆ. 

ಉಷ್ಣಾಂಶ 16 ಡಿಗ್ರಿ ಸೆಲ್ಸಿಯನ್‍ಗೆ ಕುಸಿದಿದೆ, ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮೈನಡುಗಿಸುವ ಚಳಿ ಕಂಡು ಬಂದಿದ್ದು, ಜನರು ಮಳೆ ಮತ್ತು ಚಳಿಗಾಳಿಗೆ ತತ್ತರಿಸುವಂತಾಗಿದೆ. ಇನ್ನು ಎರಡು ದಿನ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಲ್ಲೂ ಮಳೆ ಮುಂದುವರೆಯಲಿದೆ. 

ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲೂ ಮಳೆ ಮುಂದುವರೆಯಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಸುರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇನ್ನು ಒಂದು ದಿನ ಮೋಡಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

ಇದರ ಜತೆಗೆ 65 ರಿಂದ 75 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸೋಮವಾರವೂ ಮಳೆ ಮುಂದುವರೆಯಲಿದೆ. ತುಮಕೂರು ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದು, ಜನರು ಕೊಡೆ(ಛತ್ರಿ) ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ವ್ಯಾಪಾರ ವಹಿವಾಟಿಲ್ಲದೆ ವ್ಯಾಪಾರಿಗಳು ಪರದಾಡುವಂತಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಮುಂದುವರೆದಿದ್ದು, ಜನರು ಮೈಕೊರೆಯುವ ಚಳಿಗೆ ಮನೆಯಿಂದ ಹೊರಬರಲಾಗುತ್ತಿಲ್ಲ. 

ಹುಬ್ಬಳ್ಳಿಯಲ್ಲೂ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಮಹಾನಗರ ಬೆಂಗಳೂರಿನಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಜತೆ ಚಳಿಯೂ ಜನರನ್ನು ಕಂಗೆಡಿಸಿದೆ. ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದುಕೊಂಡು ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂದಿದೆ. 

Similar News