ಫೆಬ್ರವರಿಯಲ್ಲಿ 2500 ಪ್ರೌಢಶಾಲೆ ಶಿಕ್ಷಕರ ನೇಮಕ: ಸಚಿವ ಬಿ.ಸಿ.ನಾಗೇಶ್

Update: 2022-12-11 16:34 GMT

ಹೊಸದುರ್ಗ, ಡಿ.11: ಮುಂಬರುವ ಫೆಬ್ರವರಿಯಲ್ಲಿ 2500 ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.  

ತಾಲೂಕಿನ ಕಸಬಾ ಹೋಬಳಿಯ ದೇವಿಗೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ಈ ವರ್ಷವೂ 100 ಪಿಯು ಹಾಗೂ 100 ಪ್ರೌಢಶಾಲೆಗಳನ್ನು ಕೊಟ್ಟಿದ್ದೇವೆ. ಎಲ್ಲಿ ಶಾಲೆ ಹಾಗೂ ಕಾಲೇಜು ಅವಶ್ಯಕತೆ ಇದೆಯೋ ಅಲ್ಲಿ ನೂತನವಾಗಿ ಆರಂಭಿಸಿದ್ದೇವೆ. ದೇವಿಗೆರೆ ಶಾಲೆಯೂ ಶತಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಈ ಗ್ರಾಮದ ಹಿರಿಯ ಮನವಿಯಂತೆ ಈ ಭಾಗದಲ್ಲಿ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸರಕಾರಿ ವಸತಿ ನಿಲಯ ಹಾಗೂ ಪಿಯು ಕಾಲೇಜು ಸ್ಥಾಪಿಸಲು ಮುಂದಿನ ದಿನದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭಕ್ಕೂ ಮೊದಲು ಗಣ್ಯರನ್ನು ಶಾಲಾ ಆವರಣದಲ್ಲಿ ನಿರ್ಮಿಸಿರುವ ರಂಗ ಮಂದಿರ ಉದ್ಘಾಟಿಸಿದರು. ಅಲ್ಲಿಂದ ಸಮಾರಂಭದ ವೇದಿಕೆ ವರೆಗೂ ಗಣ್ಯರನ್ನು ಕುಂಭಮೇಳ ಮೆರವಣಿಗೆಯೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ವೇದಿಕೆ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಯಿತು. ಹಲವು ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಸಮಾರಂಭದಲ್ಲಿ ದೇವಿಗೆರೆಯ ಈ ಶಾಲೆಯಲ್ಲಿ ಹಿಂದಿನಿಂದಲೂ ಕರ್ತವ್ಯ ನಿರ್ವಹಿಸಿರುವ ಹಲವು ಶಿಕ್ಷಕರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಸಂಜೆ ಶಾಲಾ ಮಕ್ಕಳಿಂದಲೇ ಸಾಂಸ್ಕೃತಿಕ ನೃತ್ಯೋತ್ಸವ ನಡೆಯಿತು.

ಸಮಾರಂಭದಲ್ಲಿ ಡಿಡಿಪಿಐ ಕೆ.ರವಿಶಂಕರರೆಡ್ಡಿ, ಕ್ಷೇತ್ರಶಿಕ್ಷಣಾಧಿಕಾರಿ ಎಲ್.ಜಯಪ್ಪ, ಸಿಪಿಐ ಫೈಜುಲ್ಲಾ, ಇಒ ವಿಶ್ವನಾಥ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಿಗೆರೆ ಓ.ಮಲ್ಲೇಶ್, ಕಾರ್ಯದರ್ಶಿ ಎಸ್.ಮಲ್ಲೇಶ್ ಗ್ರಾಮ ಪಂಚಾಯತ್ ಸದಸ್ಯರಾದ ಜಂಬೂಕೇಶವ್, ಕಾವ್ಯ ವಾಗೀಶ್, ಮಮತಾ ಶ್ರೀನಿವಾಸ್, ಮುಖ್ಯಶಿಕ್ಷಕ ರಾಮಚಂದ್ರಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಆಂಜಿನಪ್ಪ, ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.


  

Similar News