ವಜಾಗೊಂಡ ನೌಕರರ ಪುನರ್ ನೇಮಕಕ್ಕೆ ಒತ್ತಾಯ; ಸುವರ್ಣಸೌಧದ ಎದುರು ಸಾರಿಗೆ ನೌಕರರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

Update: 2022-12-12 12:36 GMT

ಬೆಂಗಳೂರು, ಡಿ.12: ವಜಾಗೊಂಡ ಸಾರಿಗೆ ನೌಕರರ ಪುನರ್ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ, ಡಿ.19ರಿಂದ ಬೆಳಗಾವಿಯ ಸುವರ್ಣಸೌಧ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ಎಚ್ಚರಿಕೆ ನೀಡಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಾರಿಗೆ ನೌಕಕರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ಸಾರಿಗೆ ನೌಕರರನ್ನು ಸರಾಕಾರಿ ನೌಕರರಂತೆ ಪರಿಗಣಿಸಿ, ವೇತನವನ್ನು ಹೆಚ್ಚಿಸುವಂತೆ 2021ರ ಎ.6ರಂದು ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ ಸರಕಾರ ಪ್ರತಿಭಟನಾನಿರತ ಸಾರಿಗೆ ನೌಕಕರನ್ನು ಸೇವೆಯಿಂದ ವಜಾ ಮಾಡಿದೆ. ಇದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಅವರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು ಎಂದು ಕೋರಿದರು. 

ಸಾರಿಗೆ ನಿಗಮಗಳಲ್ಲಿ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿಯನ್ನು ಕೈಬಿಟ್ಟು, ಸರಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ ಅವರು, ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸುವರ್ಣಸೌಧ ಮುಂಭಾಗದಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ಸಾರಿಗೆ ನೌಕರರ ಕುಟುಂಬ ಸದಸ್ಯರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಗೋಷ್ಟಿಯಲ್ಲಿ ಎಸ್. ನಾಗರಾಜು, ಲಘುಮಯ್ಯ ಮತ್ತಿತರರು ಉಪಸ್ಥಿತರಿದ್ದರು.
.
ಖಾಸಗೀಕರಣಕ್ಕೆ ಹುನ್ನಾರ: ‘ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ನೇಮಕ ಮಾಡಲಾಗುತ್ತಿದೆ. ವಾಹನಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದೆ. ಅಲ್ಲದೆ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆಲ ಮಾರ್ಗಗಳನ್ನು ಖಾಸಗಿ ವಾಹನ ಚಾಲನೆಗೆ ಅನುಮತಿ ನೀಡಲಾಗುತ್ತಿದೆ. ಸರಕಾರದ ಈ ಧೋರಣೆಗಳನ್ನು ನೋಡುತ್ತಿದ್ದರೆ, ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡಲು ಸಂಚು ರೂಪಿಸುತ್ತಿದೆ ಎಂದು ಅನುಮಾನ ಉಂಟಾಗಿದೆ’

-ಆರ್.ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ನೌಕಕರ ಕೂಟದ ರಾಜ್ಯಾಧ್ಯಕ್ಷ 

----------------------------------------------------------------

ಸಿಎಂ, ಸಚಿವರನ್ನೂ ಕಡೆಗಣಿಸಿದ ಅಧಿಕಾರಿಗಳು: ‘ಪ್ರತಿಭಟನೆ ಕಾರಣ ವಜಾಗೊಂಡಿದ್ದ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವುದಾಗಿ ಸಚಿವ ಶ್ರೀರಾಮಲು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಸಚಿವರು ಪತ್ರಗಳನ್ನು ಹಾಗೂ ಟಿಪ್ಪಣಿಗಳನ್ನು ಅಧಿಕಾರಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಸಾರಿಗೆ ನಿಗಮಗಳ ಅಧಿಕಾರಿಗಳು ಅವರನ್ನು ಅವರ ಟಿಪ್ಪಣಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ’

-ಆರ್.ಚಂದ್ರಶೇಖರ್, ನೌಕರರ ಕೂಟದ ರಾಜ್ಯಾಧ್ಯಕ್ಷ 

Similar News