'ಬಿಜೆಪಿಯವರ ಸಹವಾಸ ಸಾಕಾಗಿದೆ...': ಕಾಂಗ್ರೆಸ್ ಸೇರಲು ನಿರ್ಧರಿಸಿದ ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್

Update: 2022-12-12 14:33 GMT

ಮೈಸೂರು,ಡಿ.12: ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅವರು ಅನ್ಯಾಯ ಮಾಡುವುದರಲ್ಲಿ ನಿಸ್ಸೀಮರು ಹಾಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪ್ರಕಟಿಸಿದ್ದಾರೆ. 

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು ಬಿಜೆಪಿ  ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೂ ಮಾತನಾಡಲಿದ್ದೇನೆ' ಎಂದು ಹೇಳಿದರು.

'ನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ. ನನ್ನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಹಾಗೂ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಹಾಗಾಗಿ ಆ ಪಕ್ಷದ ಸಹವಾಸ ಸಾಕಾಗಿದೆ' ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‍ ಅವರಿಗೂ ಅವರು ಅನ್ಯಾಯ ಮಾಡಿದರು. ಬಿಜೆಪಿ ಪಕ್ಷವನ್ನುಅಧಿಕಾರಕ್ಕೆ ತಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒಳ್ಳೆಯತನದಲ್ಲೇ ಮುಗಿಸಿದರು. ಇದರಿಂದ ಬಿಜೆಪಿ ಪಕ್ಷಕ್ಕೆ 40 ಸ್ಥಾನ ನಷ್ಟವಾಗಲಿದೆ. ಈಗ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವರುಣಾಕ್ಷೇತ್ರಕ್ಕೆ ತಂದು ಮುಗಿಸಲು ಹೊರಟಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಸಂಚನ್ನು ಬಿಜೆಪಿಯವರು ಮಾಡಿದ್ದಾರೆ. ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಚೆನ್ನಾಗಿರಬೇಕು ಎಂದರೆ ಅವರು ಶಿಕಾರಿಪುರದಲ್ಲೇ ಸ್ಪರ್ಧಿಸಬೇಕು ಎಂದು ಹೇಳಿದರು.

ಬಿಜೆಪಿಯವರ ದುರಾಡಳಿತದಿಂದ ಬೇಸತ್ತು ಬಿಜೆಪಿಯ 10 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದರು.

Similar News