ಕಬ್ಬು ದರ ಪಾವತಿಗೆ ಎಥನಾಲ್ ಪರಿಗಣನೆ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

Update: 2022-12-12 14:57 GMT

ಬೆಂಗಳೂರು, ಡಿ.12: ರಾಜ್ಯ ಸರಕಾರವು ಈವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗಾಸ್, ಮೊಲಾಸಿಸ್, ಪ್ರೆಸ್‍ಮಡ್‍ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸುತ್ತಿತ್ತು. ಇದೆ ಮೊದಲ ಬಾರಿಗೆ ಎಫ್‍ಆರ್‍ಪಿ ದರದ ಮೇಲೆ ಹೆಚ್ಚುವರಿಯಾಗಿ ಎಥನಾಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.

ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಆರ್‍ಪಿ ದರದ ಜೊತೆಗೆ ಪ್ರತಿ ಮೆಟ್ರಿಕ್ ಟನ್ ಒಂದಕ್ಕೆ 50 ರೂ.ಅನ್ನು ಹೆಚ್ಚುವರಿಯಾಗಿ ಪಾವತಿಸಲು ಸಂಬಂಧಿಸಿದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ಕೊಡಲಾಗಿದೆ. ಇದರಿಂದಾಗಿ ರಾಜ್ಯದ ರೈತರಿಗೆ 204ಕೋಟಿ ರೂ.ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲು ಸಿಗಲಿದೆ ಎಂದರು.

ಕರ್ನಾಟಕವು ರಾಷ್ಟ್ರದ 3ನೆ ಅತಿ ದೊಡ್ಡ ಸಕ್ಕರೆ ಉತ್ಪಾದಿಸುವ ರಾಜ್ಯವಾಗಿದೆ. ಮೊದಲನೆ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ಎರಡನೆ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ರಾಜ್ಯದಲ್ಲಿ ಒಟ್ಟು 89 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, 72 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಇದರ ಪೈಕಿ 14 ಸಹಕಾರಿ ವಲಯದಲ್ಲಿವೆ. ಸಹಕಾರಿ ವಲಯ (ಗುತ್ತಿಗೆ)-8, ಖಾಸಗಿ ವಲಯದಲ್ಲಿ 50 ಕಾರ್ಖಾನೆಗಳಿವೆ. ಇವುಗಳು 2021-22ರಲ್ಲಿ 622.26 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 59.78 ಲಕ್ಷ ಮೆ.ಟನ್ ಸಕ್ಕರೆ ಉತ್ಪಾದಿಸಿವೆ ಎಂದು ಅವರು ವಿವರಿಸಿದರು.

ಪ್ರಸಕ್ತ ಸಾಲಿನ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳು 2021-22ನೇ ಹಂಗಾಮಿನಲ್ಲಿ ನುರಿಸಿದ ಕಬ್ಬಿಗೆ 19,634.84 ಕೋಟಿ ರೂ.ಪಾವತಿಸಬೇಕಿದ್ದು, 19,922.39 ಕೋಟಿ ಪಾವತಿಸಿವೆ. ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‍ಆರ್‍ಪಿ ದರಕ್ಕಿಂತ ಹೆಚ್ಚು ಕಬ್ಬಿನ ದರ ಪಾವತಿಸಿವೆ ಎಂದು ಮುನೇನಕೊಪ್ಪ ತಿಳಿಸಿದರು.

ಪ್ರಸಕ್ತ ಸಾಲಿನ ನ.17ರ ವೇಳೆಗೆ 68 ಕಾರ್ಖಾನೆಗಳು 119.46 ಲಕ್ಷ ಮೆ.ಟನ್. ಕಬ್ಬು ನುರಿಸಿ 38.77 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿವೆ. ಸಕ್ಕರೆ ನಿರ್ದೇಶನಾಲಯವು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಮಂಡ್ಯದ ಕಬ್ಬು ಸಂಶೋಧನಾ ಸಂಸ್ಥೆಗೆ ವಾರ್ಷಿಕ ಅನುದಾನವಾಗಿ 2022-23ನೇ ಆರ್ಥಿಕ ವರ್ಷಕ್ಕೆ 75 ಲಕ್ಷ ರೂ.ಅನುದಾನ ನೀಡಿದೆ ಎಂದು ಅವರು ಹೇಳಿದರು.

ಮಂಡ್ಯದ ಸರಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಂಪನಿಯನ್ನು ಸಾರ್ವಜನಿಕ ವಲಯದಲ್ಲಿ ಮುಂದುವರಿಸಿ ಪುನಶ್ಚೇತನಗೊಳಿಸಲು ಸರಕಾರ ನಿರ್ಧರಿಸಿದೆ. 2022-23ರಲ್ಲಿ 50 ಕೋಟಿ ರೂ.ಯನ್ನು ಬಜೆಟ್‍ನಲ್ಲಿ ಮೀಸಲಿಟ್ಟಿದೆ. ಇಲ್ಲಿನವರೆಗೆ 45 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ 2022ನೇ ಸಾಲಿನಲ್ಲಿ ಹೊಸ ಸಕ್ಕರೆ ಕಾರ್ಖಾನೆ ಹಾಗೂ ಎಥನಾಲ್ ಘಟಕ ಸ್ಥಾಪನೆಗಾಗಿ ಅಂತರ ಪ್ರಮಾಣಪತ್ರ ಕೋರಿ 42 ಹೊಸ ಅರ್ಜಿಗಳು ಉದ್ಯಮಿಗಳಿಂದ ಸ್ವೀಕೃತವಾಗಿವೆ ಎಂದು ಅವರು ತಿಳಿಸಿದರು.

Similar News