×
Ad

'ಸಿದ್ರಾಮುಲ್ಲಾ ಖಾನ್‌' ಸಮರ್ಥಿಸಿಕೊಂಡಿದ್ದಕ್ಕೆ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌ ಗೆ ಜೀವ ಬೆದರಿಕೆ: ಬಿಜೆಪಿ ಆರೋಪ

Update: 2022-12-13 19:45 IST

ಬೆಂಗಳೂರು, ಡಿ.13: ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು 'ಸಿದ್ರಾಮುಲ್ಲಾ ಖಾನ್‌' ಎಂದು ಕರೆದ ವಿಚಾರವನ್ನು ಸಮರ್ಥಿಸಿಕೊಂಡಿದ್ದಕ್ಕೆ ನಮ್ಮ ಪಕ್ಷದ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಬಿಜೆಪಿ (@BJP4Karnataka) ಆರೋಪಿಸಿದೆ. 

ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ''ಸಿದ್ರಾಮುಲ್ಲಾ ಖಾನ್‌ ಎಂದು ಖ್ಯಾತಿ ಪಡೆದದ್ದನ್ನು ಸಮರ್ಥಿಸಿಕೊಂಡಿದ್ದಕ್ಕೆ ನಮ್ಮ ಪಕ್ಷದ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್‌ರವರಿಗೆ  ಸಿದ್ದರಾಮಯ್ಯ ಅವರ  ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ತಮಗಾಗದವರನ್ನು ನಾಶಮಾಡುವ ಮನಸ್ಥಿತಿ ಕಾಂಗ್ರೆಸ್ ಗೆ  ಹುಟ್ಟಿನಿಂದಲೇ ಬಂದಿದೆ'' ಎಂದು ಆರೋಪಿಸಿದೆ. 

''ನಿನ್ನೆಯಷ್ಟೇ ಕಾಂಗ್ರೆಸ್  ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಪ್ರಧಾನಿ ಮೋದಿಯವರ ಹತ್ಯೆಗೇ ಕರೆ ಕೊಟ್ಟಿದ್ದರು. ರೌಡಿ ಪರೋಡಿಗಳೇ ತುಂಬಿರುವ ರಾಜ್ಯ ಕಾಂಗ್ರೆಸ್ ನಲ್ಲಂತೂ ಕೊತ್ವಾಲನ ಶಿಷ್ಯ ಡಿ.ಕೆ ಶಿವಕುಮಾರ್  ಅಧ್ಯಕ್ಷರಾದರೆ, ಬಾರ್‌ಗಳಲ್ಲಿ ಬುರುಡೆ ಒಡೆಯುವ ನಲಪಾಡ್ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ'' ಎಂದು ಟೀಕಿಸಿದೆ. 

'ಕೊಲೆ ಆರೋಪವಿರುವ ವಿನಯ್‌ ಕುಲಕರ್ಣಿಯು ಒಂದು ಕಡೆಯಾದರೆ ಪುಡಿರೌಡಿಗಳ ಪೋಷಕರೆಂದೇ ಕುಖ್ಯಾತರಾಗಿರುವ ಮಾಜಿ ಸಚಿವ  ರಾಮಲಿಂಗಾ ರೆಡ್ಡಿ ಇನ್ನೊಂದು ಕಡೆ. ಇನ್ನು ಬಿ.ಕೆ ಹರಿಪ್ರಸಾದ್ ರಂಥ ಕೊತ್ವಾಲನ ಆತ್ಮೀಯರೆಲ್ಲ ಕಾಂಗ್ರೆಸ್‌ನಲ್ಲೇ ಇರುವಾಗ, ಸಿದ್ದರಾಮಯ್ಯನವರ ಗೂಂಡಾಗಳು ಬೆದರಿಕೆ ಹಾಕದೇ ಭಾವಗೀತೆ ಹಾಡುತ್ತಾರೆಯೇ?' ಎಂದು ಬಿಜೆಪಿ ಟ್ವೀಟ್ ಮಾಡಿದೆ.  

Similar News