ಜಿಪಂ-ತಾಪಂ ಚುನಾವಣೆ ವಿಳಂಬ; ರಾಜ್ಯ ಸರಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಬಸವನಹುಳು ರೀತಿ ನಿಧಾನ ಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ

Update: 2022-12-14 12:19 GMT

ಬೆಂಗಳೂರು, ಡಿ.14: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರಕ್ಕೆ ಹೈಕೋರ್ಟ್ (High Court of Karnataka) 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. 

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ಕಾಯ್ದೆ-2021 ಅನ್ನು ರದ್ದುಪಡಿಸಬೇಕು ಹಾಗೂ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿ ನೀಡಲು ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಜಿಪಂ, ತಾಪಂ ಚುನಾವಣೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿ, 5 ಲಕ್ಷ ರೂ.ದಂಡ ವಿಧಿಸಿ ಆದೇಶಿಸಿದೆ. 

ವಿಚಾರಣೆ ವೇಳೆ ಸೀಮಾ ನಿರ್ಣಯ ಆಯೋಗ ಪರ ಹಾಜರಾಗಿದ್ದ ಹಿರಿಯ ವಕೀಲರು, ಕ್ಷೇತ್ರ ಪುನರ್ ವಿಂಗಡಣೆಗೆ ಇನ್ನೂ ಮೂರು ತಿಂಗಳ ಕಾಲಾವಾಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. 

ಇದನ್ನು ಒಪ್ಪದ ನ್ಯಾಯಪೀಠ, ಪದೇ ಪದೇ ಕಾಲಾವಕಾಶ ಕೇಳುತ್ತಿರುವ ನಿಮ್ಮ ಹಾಗೂ ಸರಕಾರದ ನಡೆ ಸರಿಯಲ್ಲ. ಇದು ಬಸವನಹುಳು ರೀತಿಯ ನಿಧಾನ ಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಹೈಕೋರ್ಟ್ ಈ ವಿಷಯದಲ್ಲಿ ಈಗಾಗಲೇ ಆರು ತಿಂಗಳ ಸುದೀರ್ಘ ಕಾಲಾವಕಾಶ ನೀಡಿದ್ದರೂ ಈ ಪ್ರಕ್ರಿಯೆಯಲ್ಲಿ ಸ್ವಲ್ಪವೂ ಪ್ರಗತಿಯಾಗಿಲ್ಲ. ಇದು ಕೋರ್ಟ್ ಆದೇಶಗಳನ್ನು ನಿಷ್ಕ್ರಿಯಗೊಳಿಸುವ ಧೋರಣೆಯಿಂದ ಕೂಡಿದ ವರ್ತನೆ ಎಂದು ಬೇಸರ ವ್ಯಕ್ತಪಡಿಸಿತು. 

2023ರ ಫೆ.1ರೊಳಗೆ ತಾಲೂಕು ಪಂಚಾಯಿತಿ ಹಾಗೂ ಜಿಲಾ ಪಂಚಾಯಿತಿ ಕ್ಷೇತ್ರ ಪುನರ್ವಿಂಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದ ನ್ಯಾಯಪೀಠ ವಿಚಾರಣೆಯನ್ನು 2023ರ ಫೆ.2ಕ್ಕೆ ಮುಂದೂಡಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ: ಸ್ಯಾಂಡಲ್​ವುಡ್ ನಟಿ, ತಾಯಿಗೆ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌ 

Similar News