‘ಬಿಎಸ್‍ವೈ ಮುಕ್ತ BJP’ ಮಾಡುವ ಆಜ್ಞೆ ಯಾರದ್ದು: ಕಾಂಗ್ರೆಸ್ ಪ್ರಶ್ನೆ

Update: 2022-12-14 12:49 GMT

ಬೆಂಗಳೂರು, ಡಿ. 14: ‘ಬಿಜೆಪಿಯಲ್ಲಿ ಬಿಎಸ್‍ವೈ ಅವರು ಸಾಕಿದ ಗಿಳಿಗಳೇ ಹದ್ದುಗಳಾಗಿ ಕುಕ್ಕುತ್ತಿವೆ! ಬಿಜೆಪಿ ಬರು ಬಿಡಲು ಬಿಎಸ್‍ವೈ ಆಸರೆ ಬೇಕಿತ್ತು, ಬೇರು ಬಿಟ್ಟು ಮೊಳಕೆಯೊಡೆದ ಮೇಲೆ ಸಂತೋಷ ಕೂಟದ್ದೇ ಸರ್ವಾಧಿಕಾರವಾಗಿದೆ. ‘ಬಿಎಸ್‍ವೈ ಮುಕ್ತ ಬಿಜೆಪಿ’ ಮಾಡುವ ಆಜ್ಞೆ ಯಾರದ್ದು ಬಿಜೆಪಿಯದ್ದೇ? ಅಥವಾ ಕೇಶವ ಕೃಪದ್ದೇ?, ಹೈಕಮಾಂಡಿನದ್ದೇ?, ಸಂತೋಷ ಕೂಟದ್ದೇ?. ಮೋದಿ-ಶಾ ಅವರದ್ದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯಲ್ಲಿ ಬಿಎಸ್‍ವೈ ಚಲಾವಣೆಯಲ್ಲಿಲ್ಲದ ನಾಣ್ಯದಂತಾಗಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಈಗ ಸಂತೋಷ ಕೂಟಕ್ಕೆ ಹೈಜಂಪ್ ಮಾಡಿದರೆ?, ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಬಿಎಸ್‍ವೈ ಅವರ ಫೋಟೋಗೆ ಜಾಗ ನೀಡದ ಬಿಜೆಪಿ ಅಸಲಿಗೆ ಮಾಡಲು ಹೊರಟಿರುವುದು ‘ಬಿಎಸ್‍ವೈ ಮುಕ್ತ ಬಿಜೆಪಿ’ ಸಂಕಲ್ಪ!. ಗುರುವಿಗೆ ಅವಮಾನಿಸುವ ನೇತೃತ್ವವನ್ನು ಸ್ವತಃ ಬೊಮ್ಮಾಯಿಯವರೇ ವಹಿಸಿರುವಂತಿದೆ’ ಎಂದು ದೂರಿದೆ.

‘ಮಹಾರಾಷ್ಟ್ರ ಬಿಜೆಪಿಗೂ ಕರ್ನಾಟಕದ ಬಿಜೆಪಿಗೂ ಹೊಂದಾಣಿಕೆ ಇರುವುದು ಆಪರೇಷನ್ ಕಮಲದ ಸಹಕಾರದಲ್ಲಿ ಮಾತ್ರವೇ? ಕದ್ದ ಶಾಸಕರನ್ನು ಮುಂಬೈ ಹೋಟೆಲ್‍ನಲ್ಲಿ ಅಡಗಿಸಿಡಲು ಮಹಾರಾಷ್ಟ್ರ ಬಿಜೆಪಿಯ ಸಹಕಾರದ ಋಣ ಭಾರ ರಾಜ್ಯ ಬಿಜೆಪಿ ಸರಕಾರಕ್ಕಿದೆಯೇ? ಆ ಕಾರಣಕ್ಕೆ ಇಲ್ಲಿನ ನಾಯಕರು ಕರ್ನಾಟಕ ಹಿತ ಬಲಿ ಕೊಡುತ್ತಿದ್ದಾರೆಯೇ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಬೆಳಗಾವಿ ಗಡಿ ವಿಚಾರದಲ್ಲಿ ರಾಜ್ಯದ ಬಿಜೆಪಿಯ 25 ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ, ಮಹಾರಾಷ್ಟ್ರ ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿಯಾದರೂ ಕರ್ನಾಟಕದ ಬಿಜೆಪಿ ಸಂಸದರಿಗೆ ಇನ್ನೂ ಎಚ್ಚರಾಗಿಲ್ಲ. ಅಮಿತ್ ಶಾ ಎದುರು ಹೋಗಲು ನಡುಕ ಹುಟ್ಟುತ್ತದೆಯೇ, ಚಳಿ ಜ್ವರ ಬರುತ್ತದೆಯೇ? ಬಿಜೆಪಿಗರ ದಮ್ಮು ತಾಕತ್ತು ಎಲ್ಲ ಮೈಕ್ ಮುಂದೆ ಮಾತ್ರವೇ?’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News