ಬಾಬಾಬುಡಾನ್‍ದರ್ಗಾ, ದತ್ತಪೀಠದಲ್ಲಿನ ಆಚರಣೆ; ವ್ಯವಸ್ಥಾಪನ ಸಮಿತಿಗೆ ಪೂರ್ಣ ಅಧಿಕಾರ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

Update: 2022-12-14 14:37 GMT

ಚಿಕ್ಕಮಗಳೂರು, ಡಿ.14: ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್‍ಗಿರಿ ಸ್ವಾಮಿ ದರ್ಗಾ ಹಾಗೂ ದತ್ತಪೀಠ ಯಾವುದೇ ಒಂದು ಧರ್ಮದವರಿಗೆ ಸೇರಿದ್ದಲ್ಲ. ಅಲ್ಲಿನ ವಿಶೇಷ ಪೂಜಾ ಪದ್ಧತಿಗಳ ಬಗ್ಗೆ ಅರ್ಚಕರು ಹಾಗೂ ಮುಝಾವರ್ ಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದ್ದು, ಅದನ್ನು ಮೀರಿದಲ್ಲಿ ಕ್ರಮಕೈಗೊಳ್ಳಲಾಗುವುದು. ಇಲ್ಲವೇ ಅರ್ಚಕರು, ಮುಝಾವರ್ ಗಳ ನೇಮಕವನ್ನೂ ರದ್ದುಗೊಳಿಸಲಾಗುವುದು. ಈ ಧಾರ್ಮಿಕ ಕೇಂದ್ರದಲ್ಲಿನ ಆಚರಣೆಗಳ ಸಂಬಂಧ ಸರಕಾರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು, ಅಲ್ಲಿನ ಆಚರಣೆಗಳ ಬಗ್ಗೆ ವ್ಯವಸ್ಥಾಪನಾ ಸಮಿತಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ. 

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದತ್ತಜಯಂತಿ ಸಂದರ್ಭ ಅರ್ಚಕರಿಗೆ ಹೇಗೆ ಪೂಜೆಗೆ ಅವಕಾಶ ನೀಡಲಾಗಿದೆಯೋ ಹಾಗೆಯೇ ಉರೂಸ್ ಸಂದರ್ಭ ಮುಝಾವರ್ ಳ ಧಾರ್ಮಿಕ ಆಚರಣೆಗಳಿಗೂ ಅವಕಾಶ ನೀಡಲಾಗುತ್ತದೆ' ಎಂದು ತಿಳಿಸಿದರು.

'ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್‍ಗಿರಿ ಸ್ವಾಮಿ ದರ್ಗಾ ಹಾಗೂ ದತ್ತಪೀಠದ ವಿವಾದ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಅಲ್ಲಿನ ಪೂಜಾ ವಿಧಾನಗಳ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. 2006ರಲ್ಲಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು. 2018ರ ಮಾರ್ಚ್ 30ರಂದು ನಿವೃತ್ತ ನ್ಯಾಯಾಧೀಶ ಜಸ್ಟೀಸ್ ನಾಗಮೋಹನದಾಸ್ ಸಮಿತಿ ಈ ಸಂಬಂಧ ಸರಕಾರಕ್ಕೆ ವರದಿ ನೀಡಿದ್ದು, ವರದಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು' 

2015ರಲ್ಲಿ ರಾಜ್ಯ ಸರಕಾರ ತೀರ್ಮಾನ ಕೈಗೊಳ್ಳುವ ತನಕ ಯಥಾಸ್ಥಿತಿ ಕಾಪಾಡುವಂತೆ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದೇ ವೇಳೆ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ನೀಡಿದ ವರದಿಯನ್ನು ಪರಿಗಣಿಸದಿರಲು ಹಾಲಿ ಸರಕಾರ ತೀರ್ಮಾನಿಸಿದ್ದರಿಂದ ಈ ಸಂಬಂಧ ಸರಕಾರವೇ ತೀರ್ಮಾನ ಕೈಗೊಳ್ಳುವಂತೆ ಆದೇಶ ನೀಡಿತ್ತು. 2022ರಲ್ಲಿ ರಾಜ್ಯ ಸರಕಾರ ಈ ಸಂಬಂಧ ತೀರ್ಮಾನ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಸರಕಾರ ನ್ಯಾಯಾಲಯದ ಅದೇಶಕ್ಕನುಗುಣವಾಗಿ ವ್ಯವಸ್ಥಾಪನ ಸಮಿತಿಯನ್ನು ರಚಿಸಿದೆ. ವ್ಯವಸ್ಥಾಪನ ಸಮಿತಿ ನೇತೃತ್ವದಲ್ಲಿ ದತ್ತಜಯಂತಿ ಆಚರಣೆ ನಡೆದಿದೆ ಎಂದು ತಿಳಿಸಿದರು.

ಅರ್ಚಕರು ಮತ್ತು ಮುಝಾವರ್ ನಡುವೆ ನಡೆಯುತ್ತಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ಧರ್ಮದವರಿಗೂ ಅಲ್ಲಿ ಸಮಾನ ಅವಕಾಶಗಳಿವೆ. ಕಾನೂನು ಬಾಹಿರವಾಗಿ ನಡೆದುಕೊಂಡರೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ನೇಮಕ ಮಾಡಿದೆ. ಇಬ್ಬರು ಮಹಿಳೆಯರೂ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಸಮಿತಿ ತಪ್ಪು ತೀರ್ಮಾನ ಕೈಗೊಂಡರೇ ಅದನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು.

ಮಳೆಯಿಂದ ಹಾನಿಯಾಗಿರುವ ಇತ್ತೀಚಿನ ಮಾಹಿತಿಯನ್ನು ಈಗಾಗಲೇ ಸರಕಾರಕ್ಕೆ ಕಳುಸಿಕೊಡಲಾಗಿದೆ. ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗಿದ್ದು, ಸ್ವಲ್ಪಮಟ್ಟಿನ ತೊಂದರೆಯಾಗಿದೆ. ಈ ಸಾಲಿನಲ್ಲಿ 54ರಿಂದ 55 ಸಾವಿರ ಫಲಾನುಭವಿಗಳಿಗೆ 128 ಕೋಟಿ ರೂ. ಬೆಳೆ ಪರಿಹಾರ ವಿತರಿಸಲಾಗಿದೆ.

- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ.

Similar News